ಕಂಪ್ಲಿ: ವಸತಿ ಯೋಜನೆಯಡಿ ಮನೆ ವಿತರಿಸಲು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮಂಡಲದ ಕಾರ್ಯಕರ್ತರು ತಾಪಂ ಇಒ ಆರ್.ಕೆ.ಶ್ರೀಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ವಸತಿ ಶಾಲೆಗೆ ರಸ್ತೆ ಸಮಸ್ಯೆ
ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ 200 ಮನೆಗಳನ್ನು ನೀಡಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಹಣ ಪಡೆದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.
ಇದರಂತೆಯೇ ರಾಜ್ಯಾದ್ಯಂತ ಹಣ ಪಡೆದು ಮನೆ ಮಂಜೂರು ಮಾಡಿದ್ದಾರೆ. ಹಣ ಕೊಡದೆ ಇರುವ ತಾಲೂಕುಗಳ ಮನೆಗಳನ್ನು ರದ್ದುಗೊಳಿಸಿದ್ದಾರೆ. ವಸತಿ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಅಳ್ಳಳ್ಳಿ ವೀರೇಶ್, ಸುಗುಣ, ಪಿ.ಬ್ರಹ್ಮಯ್ಯ, ಡಿ.ಶ್ರೀಧರ ಶ್ರೇಷ್ಠಿ, ಜಿ.ಸುಧಾಕರ, ಟಿ.ವಿ.ಸುದರ್ಶನರೆಡ್ಡಿ, ಜಿ.ಶ್ರೀನಿವಾಸ, ಬಿ.ದೇವೇಂದ್ರ, ಬಾಲಚಂದ್ರ, ವೈ.ಮುರಳಿಮೋಹನರೆಡ್ಡಿ, ಇಟಗಿ ಮಂಜುನಾಥಗೌಡ, ಪ್ರಶಾಂತ ಇತರರಿದ್ದರು.