ರಶ್ಮಿ  
ಜಿಲ್ಲೆ

ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಕೊಳ್ಳೇಗಾಲ: ಗೌರಿ-ಗಣೇಶ ಹಬ್ಬಕ್ಕೆ ಕರೆಯಲು ತವರು ಮನೆಯಲ್ಲಿ ಯಾರಿಲ್ಲ ಎಂದು ಬೇಸರಗೊಂಡ ಗೃಹಿಣಿ ನೇಣು ಬಿಗಿದು ಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಮಧುವನಹಳ್ಳಿ ಆರುವನಪುರ ಬಡಾವಣೆಯ ಸಿದ್ದರಾಜು ಅವರ ಪತ್ನಿ ರಶ್ಮಿ (32) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಈಕೆ ಹೊಂಡರಬಾಳು ಗ್ರಾಮದವರಾಗಿದ್ದು ಕೆಲ ವರ್ಷಗಳ ಹಿಂದೆ ಮಧುವನಹಳ್ಳಿ ಆರುವನಪುರ ನಿವಾಸಿ ಸಿದ್ದರಾಜು ಜತೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ರಶ್ಮಿ ಅವರ ತಂದೆ, ತಾಯಿ ಹಾಗೂ ಅಣ್ಣ ಮೃತಪಟ್ಟಿದ್ದರಿಂದ ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ತವರಿನಲ್ಲಿ ಕರೆದು ಅರಿಶಿಣ-ಕುಂಕುಮ ಕೊಡಲು ಯಾರೂ ಇಲ್ಲ ಎಂದು ನೊಂದು ಕೊಂಡಿದ್ದರು. ಈ ನಡುವೆ ಮಧುವನಹಳ್ಳಿ ಆರವನಪುರದ ಗಂಡನ ಮನೆಯಲ್ಲಿ ಹಬ್ಬ ಆಚರಣೆ ಮಾಡಲು ಎಲ್ಲ ಪೂಜಾ ತಯಾರು ಮಾಡಿಕೊಂಡಿದ್ದ ರಶ್ಮಿ ತವರಿನವರನ್ನು ಕಳೆದು ಕೊಂಡ ನೋವಿನಿಂದ ಬೇಸರದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.