ಜಿಲ್ಲೆ

ಚೆನ್ನಾಗಿ ನೋಡಿಕೊಳ್ತೀವಿ ಎಂಬ ಮಾತು ನಂಬಿ ಮದುವೆಯಾದ ಮಹಿಳೆಯ ದುರಂತ ಸಾವು

ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬಳು ಬಲಿಯಾಗಿದ್ದು, ಆಕೆಯ ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
 
ಇದಾಗಿರುವುದು ಶನಿವಾರ ಸಂಜೆ ತಾಲೂಕಿನ ಲಕ್ಯಾ ಹೋಬಳಿ ಸಿಂದಿಗೆರೆ ಗ್ರಾಮದಲ್ಲಿ. ಗ್ರಾಮದ ಮಿಥುನ್ ಎಂಬಾತನ ಪತ್ನಿ ಶೋಭಾ (21) ಸಾವಿಗೀಡಾದ ದುರ್ದೈವಿ. ಘಟನೆಯಲ್ಲಿ ಈ ದಂಪತಿಯ ಪುತ್ರ ಒಂದು ವರ್ಷ ಎಂಟು ತಿಂಗಳ ಕುಶಾಲ್‍ಗೂ ಸುಟ್ಟಗಾಯಗಳಿಗೀಡಾಗಿದ್ದು, ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಅತ್ತೆ ಚಂದ್ರಮ್ಮಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಪತಿ ಮಿಥುನ್ ಹಾಗೂ ಮಾವ ರಾಜಶೇಖರ್ ಅವರಿಗಾಗಿ ಶೋಧ ನಡೆಯುತ್ತಿದೆ.
 
ಬೆಂಕಿ ಹಚ್ಚಿದ ಆರೋಪ
ತಂದೆಯ ಮನೆಯಿಂದ ಹಣ ತಂದಿಲ್ಲವೆಂದು ಕಿರಿ ಕಿರಿ ಮಾಡುತ್ತಿದ್ದ ಈ ಮೂವರು ತಂದೆ ತವರಿ ಒಂದು ಲಕ್ಷ ರೂ. ತರುವಂತೆ ಶೋಭಾಗೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ತಂದೆ ಈಶ್ವರಪ್ಪ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಶನಿವಾರ ಸಂಜೆ ಆಕೆ ಹಾಗೂ ಮಗುವನ್ನು ಮನೆ ಹಿಂಭಾಗದ ಗೋದಾಮಿಗೆ ಎಳೆದೊಯ್ದಿದ್ದು ಆಕೆಯ ಮೈಮೇಲೆ ಸೀಮೆಎಣ್ಣೆ ಅಥವಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ತೀವ್ರ ಸುಟ್ಟಗಾಯಗಳಿಗೀಡಾಗಿ ಗಂಭೀರ ಸ್ಥಿತಿಯಲ್ಲಿರುವ ಮಗು ಕುಶಾಲ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ.
 
ಮೂರೂವರೆ ವರ್ಷದ ಹಿಂದೆ ವಿವಾಹ
ಕಡೂರು ತಾಲೂಕು ಪಿಳ್ಳೇನಹಳ್ಳಿ ಗ್ರಾಮದ ಈಶ್ವರಪ್ಪ ಹಾಗೂ ಯಶೋದಾ ದಂಪತಿಯ ಪುತ್ರಿ ಶೋಭಾ ಹಾಗೂ ಮಿಥುನ್ ಅವರ ಮದುವೆ ಕಳೆದ ಮೂರೂವರೆ ವರ್ಷಗಳ ಹಿಂದೆ ನಡೆದಿತ್ತು. ತಂದೆ, ತಾಯಿಗೆ ಮಗಳು, ಮಗನೂ ಆಗಿ ಬೆಳೆದಿದ್ದ ಏಕೈಕ ಪುತ್ರಿ ಶೋಭಾಳನ್ನು ಪಿಯುಸಿವರೆಗೆ ಓದಿಸಿದ್ದರು. ಮದುವೆ ಸಲುವಾಗಿ ಮಿಥುನ್ ಮನೆಯವರು ಕೇಳಿಕೊಂಡಾಗ ಇನ್ನೆರಡು ವರ್ಷವಲ್ಲದೆ ಮದುವೆ ಮಾಡುವುದಿಲ್ಲವೆಂದು ತಿಳಿಸಿದರೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ ಮೇರೆಗೆ ಕೊನೆಗೆ ಮದುವೆಗೆ ಆಕೆಯ ಮನೆಯವರು ಒಪ್ಪಿಗೆ ನೀಡಿದ್ದರು. 
 
ಬಡತನದ ನಡುವೆ ಚಿನ್ನ ನೀಡಿದ್ದರು
ತೀರಾ ಬಡತನದ ನಡುವೆಯೂ ಮದುವೆ ಸಂದರ್ಭ ಮಿಥುನ್‍ಗೆ ಚಿನ್ನದ ಉಂಗುರ ಹಾಗೂ ಸರವನ್ನು ಉಡುಗೊರೆಯಾಗಿ ನೀಡಲಾಗಿತ್ತಲ್ಲದೆ, ಶೋಭಾಗೂ ಕಿವಿಯೋಲೆ, ಜುಮ್ಕಿ ಮಾಡಿಸಿ ನೀಡಲಾಗಿತ್ತು. ಮೊದಮೊದಲು ಇವರ ದಾಂಪತ್ಯ ಅನ್ಯೋನ್ಯವಾಗಿತ್ತು. ಅದರ ಫಲವಾಗಿ ಇವರಿಗೆ ಗಂಡು ಮಗು ಜನಿಸಿತ್ತು. ದಿನ ಕಳೆದಂತೆ ಅತ್ತೆ, ಮಾವ ಮೂದಲಿಸತೊಡಗಿದಂತೆ ಪತಿ ಮಿಥುನ್ ಸಹ ಅವರೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದುದಲ್ಲದೆ, ದೈಹಿಕವಾಗಿಯೂ ಹಿಂಸೆ ನೀಡುತ್ತಿದ್ದನೆಂದು ಈಶ್ವರಪ್ಪ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. 
 
ತಂದೆ ಬಳಿ ಕಿರುಕುಳ ಹೇಳಿಕೊಂಡಿದ್ದಳು
ಪತಿ ಹಾಗೂ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದ ಬಗ್ಗೆ ಮಗಳು ಶೋಭಾ ಆಗಿಂದಾಗ್ಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಳೆನ್ನಲಾಗಿದೆ. ಕಳೆದ ವಾರವಷ್ಟೇ ತವರಿಗೆ ಬಂದಿದ್ದ ಶೋಭಾಳನ್ನು ಮಂಗಳವಾರವೆಂದು ಸಹ ನೋಡದೆ ಬರುವಂತೆ ಪತಿಯ ಮನೆಯವರು ಒತ್ತಾಯದಿಂದ ಕರೆಸಿಕೊಂಡಿದ್ದರೆನ್ನಲಾಗಿದೆ. 
 
ಅನಾರೋಗ್ಯದ ಕಾರಣಕ್ಕಾಗಿ ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಶೋಭಾ, ಅನಂತರ ಮನೆಗೆ ತೆರಳಿದ್ದು, ಮಧ್ಯಾಹ್ನ ಹಾಗೂ ಸಂಜೆ 6 ಗಂಟೆ ಸುಮಾರಿಗೆ ತಮ್ಮ ತವರಿನ ಬಂಧುಗಳ ಜತೆ ದೂರವಾಣಿಯಲ್ಲಿ ಮಾತನಾಡಿದ್ದಳು. 
 
ಸ್ಥಳಕ್ಕೆ ಅಗ್ನಿಶಾಮಕ ದಳ 
ರಾಜಶೇಖರ್ ಮನೆಯಲ್ಲಿ ಅಗ್ನಿ ಅನಾಹುತ ಕೈಮೀರುವ ಸಂಭಾವ್ಯ ಪರಿಸ್ಥಿತಿ ಅರಿತು ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಅನಾಹುತವೇನೂ ಸಂಭವಿಸಲಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಶಶಿಧರ್ ತಿಳಿಸಿದ್ದಾರೆ.