ಜಿಲ್ಲೆ

ಮಂಡ್ರಗಿ ಆಶ್ರಯದಲ್ಲಿ ಮನೆಗಳು ಸಿದ್ಧ

ಬಳ್ಳಾರಿ : ನಗರದ ಹೊರವಲಯದ ಮುಂಡ್ರಗಿ ಆಶ್ರಯದ ಬಡಾವಣೆಯಲ್ಲಿ ವಸತಿ ರಹಿತರಿಗೆ ನಿರ್ಮಾಣಗೊಂಡ ಎಂಟು ನೂರು ಮನೆಗಳನ್ನು ಮಹಾನಗರ ಪಾಲಿಕೆಯಿಂದ ಅರ್ಹ ಫಲಾನುಭವಿಗಳಿಗೆ ಕೆಲ ತಿಂಗಳಲ್ಲೇ ನೀಡಲು ಸಜ್ಜಾಗಿದೆ.

ಕಳೆದ ಹದಿನೈದು ವರ್ಷದ ಹಿಂದೆ ಸಿಎಸ್‌ಆರ್ ಅನುದಾನದಡಿ ಬಿಜೆಪಿ ಸರ್ಕಾರದಲ್ಲಿ ಮುಂಡ್ರಗಿಯಲ್ಲಿ ಮೂರು ನೂರು ಎಕರೆ ಭೂಮಿ ಖರೀದಿಸಿ ಜಿಪ್ಲಸ್2 ಅರ್ಪಾಟೆಮೆಂಟ್ ಮಾದರಿಯಲ್ಲಿ ವಸತಿಗಳು ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದ ಬಳಿಕ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತು. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಆಗಿನ ನಗರ ಶಾಸಕ ಅನಿಲ್ ಲಾಡ್ ಜಿಪ್ಲಸ್ ಮಾದರಿಯಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ವಸತಿಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ವರ್ಷದಿಂದ ವರ್ಷಕ್ಕೆ ಕಾಮಗಾರಿಗೆ ಅನುದಾನ ವಿಳಂಬ, ಕೊರೊನಾದಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ವೇಗವಾಗಿ ಸಾಗಬೇಕಿದ್ದ ಕಾಮಗಾರಿ ಅಮೆವೇಗಕ್ಕೆ ತಲುಪಿತು. ಸದ್ಯ, ಕಳೆದ ಕೆಲ ವರ್ಷದಿಂದ ಕಾಮಗಾರಿ ತುಸು ವೇಗ ಪಡೆದಿದ್ದು ಕೆಲ ಮನೆಗಳು ನಿರ್ಮಾಣಗೊಂಡಿವೆ.

800 ಮನೆಗಳ ನಿರ್ಮಾಣ : ಪರಿಶಿಷ್ಟ ಜಾತಿ 1057, ಪರಿಶಿಷ್ಟ ಪಂಗಡ 1751, ಅಲ್ಪ ಸಂಖ್ಯಾತರು 861, ಇತರೆ 1943 ಸೇರಿ ಒಟ್ಟು 5616 ವಸತಿಗಳು ನಿರ್ಮಿಸಲು ಪಾಲಿಕೆ ಮುಂದಾಗಿದ್ದು ಈಗಾಗಲೇ 4291 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲನೇ ಹಂತದಲ್ಲಿ 2,592 ಮನೆಗಳ ನಿರ್ಮಾಣದ ಗುರಿಯನ್ನು ಹೊಂದಲಾಗಿತ್ತು. ನಾಗಾರ್ಜುನ ಕನ್ಸ್‌ಕ್ಟನ್ಸ್ ಕಂಪನಿಯು ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಸದ್ಯ ಎಂಟು ನೂರು ಮನೆಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ಕಾಮಗಾರಿ ನಡೆಯುತ್ತಿರುವುದರಿಂದ ಇನ್ನೂ ಎರಡ್ಮರೂ ತಿಂಗಳು ಕಾಯಬೇಕಾದ ಅನಿವಾರ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೂಲ ಸೌಕರ್ಯ ಕೊರತೆ : ನಗರದಿಂದ ಹತ್ತಾರು ಕಿ.ಮೀ. ದೂರದಲ್ಲಿ ಮನೆಗಳು ನಿರ್ಮಾಣಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಮೂಲ ಸೌಕರ್ಯಗಳಿಗೆ ಪರದಾಡಬೇಕಿದೆ. ನಿತ್ಯ ನಗರಕ್ಕೆ ಉದ್ಯೋಗಕ್ಕಾಗಿ ಹೋಗಿ ಬರಲು ಬಸ್‌ಗಳ ಕೊರತೆ ಕಾಡಲಿದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ಸುತ್ತಲೂ ಶಾಲೆಗಳ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಕ್ಕಳ ಶಿಕ್ಷಣದಿಂದ ವಂಚಿತರಾಗಬಹುದು ಭಯ ಪೋಷಕರಲ್ಲಿದೆ. ಸದ್ಯದ ಮಟ್ಟಿಗೆ ಜನ ಬೀಡು ಪ್ರದೇಶವಾಗದೆ ಇರುವುದರಿಂದ ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗಳು ನಡೆದರೆ ಹೊಣೆ ಯಾರು ಎಂಬ ಆಲೋಚನೆ ಕೂಡಯಿದೆ. ಯಾವುದೇ ಒಂದು ಪ್ರದೇಶದಲ್ಲಿ ವಾಸಿಸಲು ಮುಖ್ಯವಾಗಿ ನೀರು ಅವಶ್ಯಕತೆಯಿದೆ. ಆದರೆ, ಸದ್ಯ ಫಲಾನುಭವಿಗಳಿಗೆ ವಿತರಿಸಲು ಸಜ್ಜಾಗಿರುವ ಮನೆಗಳಿಗೆ ಇನ್ನೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ, ಈಗಾಗಲೇ ನಗರದಲ್ಲಿ ಬೇಸಿಗೆ ಕಾಲದಲ್ಲಿ ಕುಡಿವ ನೀರಿಗಾಗಿ ಜನರು ಪರದಾಡುತ್ತಿದ್ದು ಅಲ್ಲಿಯೂ ಕೂಡ ಅವ್ಯವಸ್ಥೆ ಪಡಬೇಕಿದೆ. ಆದ್ದರಿಂದ, ಹಲವಾರು ಫಲಾನುಭವಿಗಳು ಆ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿ ಮನೆಗಳು ವಿತರಿಸಲಿ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಬಾಕ್ಸ್ : ಮುಂಡ್ರಗಿ ಆಶ್ರಯ ಬಡಾವಣೆಯ ಸಮೀಪದಲ್ಲಿ ಕಾಲುವೆ ಹರಿಯುತ್ತಿದ್ದು ಎಂಟು ನೂರು ಮನೆಗಳಿಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಡಿಸಿ ಅವರು ಸಭೆ ನಡೆಸಿ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಅಲ್ಲದೆ, ಒಳ ಚರಂಡಿ ವ್ಯವಸ್ಥೆ ಕಲ್ಪಿಸಲು ಇಲಾಖೆಗೂ ಸೂಚಿಸಲಾಗಿದೆ. ಜನರು ಅಲ್ಲಿ ವಾಸಿಸಲು ಆರಂಭಿಸಿದರೆ ಪ್ರತಿಯೊಂದು ಸೌಲಭ್ಯಗಳು ಒದಗಲಿವೆ ಎಂದು ಪಾಲಿಕೆಯ ಅಧಿಕಾರಿ ತಿಳಿಸಿದರು.

ಕೋಟ್... ಮಂಡ್ರಗಿ ಆಶ್ರಯ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಎಂಟು ನೂರು ಮನೆಗಳಿಗೆ ನಾಲ್ಕು ನೂರು ಅರ್ಹ ಪಲಾನುಭವಿಗಳು ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದಾರೆ. ಮೇ ತಿಂಗಳಲ್ಲಿ ಹಣ ಪಾವತಿಸಿದ ಎಲ್ಲರಿಗೂ ಮನೆಗಳು ವಿತರಿಸಲಾಗುವುದು.

- ಖಲೀಲ್ ಸಾಬ್, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ