ಜಾಕ್‌ವೆಲ್‌ಗಾಗಿ ಬಂಡೆ ಸ್ಫೋಟಿಸಿ ಸ್ಥಳೀಯ ಮನೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  
ಜಿಲ್ಲೆ

ಬಂಡೆ ಸ್ಫೋಟದಿಂದ ಮನೆಗಳಿಗೆ ಹಾನಿ : ಸ್ಥಳಕ್ಕೆ ರಾಜೇಶ್ ನಾಕ್ ಭೇಟಿ

ಸೌಮ್ಯ ಆರ್

ಬಂಟ್ವಾಳ: ಪುತ್ತೂರು-ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿನ ಉದ್ದೇಶದ ಬಹುಗ್ರಾಮ ಯೋಜನೆಗೆ ಬಾಳ್ತಿಲ-ಶಂಭೂರು ಗ್ರಾಮದ ಗಡಿ ಪ್ರದೇಶದ ಕಂದಾಯ ಮಜಲುವಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಾಕ್‌ವೆಲ್‌ಗಾಗಿ ಬಂಡೆ ಸ್ಫೋಟಿಸಿ ಸ್ಥಳೀಯ ಮನೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಮನೆ ಹಾನಿ ಪರಿಶೀಲಿಸಿದರು. ಹಾನಿಯಾಗಿರುವ ಎಲ್ಲ ಮನೆಗಳನ್ನು ಕಂದಾಯ ಇಲಾಖೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ಸ್ಥಳೀಯ ಪ್ರಮುಖರೊಂದಿಗೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಬೇಕು. ಆ ವರದಿ ಆಧಾರದಲ್ಲಿ ಮುಂದೆ ಮನೆಗಳ ದುರಸ್ತಿಗೆ ಸಂಬಂಧಿಸಿ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಬೇಕಿದೆ ಎಂದರು. ಇದರ ಕುರಿತು ಸ್ಥಳೀಯ 5 ಮಂದಿಗೆ ಜವಾಬ್ದಾರಿ ನೀಡಲಾಯಿತು.

ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆ ಭಾರಿ ವಾಹನಗಳು ತೆರಳಿ ರಸ್ತೆ ಹದಗೆಟ್ಟಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದರ ದುರಸ್ತಿಗೂ ಕ್ರಮಕೈಗೊಳ್ಳುವಂತೆ ಎಇಇ ಜಿ.ಕೆ.ನಾಯ್‌ಗೆ ಶಾಸಕರು ಸೂಚಿಸಿದರು. ಸ್ಥಳೀಯ ವರ್ಗ ಜಾಗಗಳಿಗೆ ತೊಂದರೆಯಾಗದಂತೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಬೇಕು, ಜತೆಗೆ ಮುಂದೆ ಸ್ಫೋಟ ನಡೆಸುವ ವೇಳೆ ಮನೆಗಳ ಪಕ್ಕದಲ್ಲಿ ಒಬ್ಬ ವ್ಯಕ್ತಿಯನ್ನು ನಿಲ್ಲಿಸುವಂತೆ ಯೋಜನೆ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಅವರಿಗೆ ಸೂಚಿಸಿದರು. ಯೋಜನೆಯ ನೀಲಿ ನಕಾಶೆ ಗ್ರಾಪಂಗಳಿಗೆ ನೀಡುವಂತೆ ಸೂಚಿಸಿದರು.

ಕಂದಾಯ ನಿರೀಕ್ಷಕ ವಿಜಯ್ ಆರ್., ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು, ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಶಂಭೂರು, ಸದಸ್ಯರಾದ ಪ್ರಕಾಶ್ ಮಡಿಮುಗೇರು, ಯೋಗೀಶ್ ಶಾಂತಿಲ, ಬಾಳ್ತಿಲ ಗ್ರಾಪಂ ಉಪಾಧ್ಯಕ್ಷೆ ರಂಜಿನಿ, ಸದಸ್ಯರಾದ ಶಿವರಾಜ್ ಕಾಂದಿಲ, ಚಂದ್ರಶೇಖರ್, ಆನಂದ ಶೆಟ್ಟಿ, ವಿಠಲ ನಾಯ್ಕ, ಶರತ್ ಉಪಸ್ಥಿತರಿದ್ದರು.