ಚನ್ನಂಗಿ ಚಕ್ಕ ರೇಷ್ಮೆ ಹಾಡಿಯಲ್ಲಿ ಮನೆ ಮೇಲೆ ದಾಳಿ ಮಾಡಿರುವುದು. 
ಜಿಲ್ಲೆ

ಕಾಡಾನೆ ದಾಳಿಗೆ ಮನೆ ವಸ್ತುಗಳು ನಾಶ

ಲೋಕೇಶ್ ಮನು. ಡಿ

ಸಿದ್ದಾಪುರ: ಚನ್ನಂಗಿ ಚಕ್ಕ ರೇಷ್ಮೆ ಹಾಡಿಯಲ್ಲಿ ಶನಿವಾರ ಮಧ್ಯರಾತ್ರಿ ಕಾಡಾನೆಯೊಂದು ಮನೆಯೊಂದರ ಆವರಣದಲ್ಲಿ ಸಂಚರಿಸಿ ಆಹಾರ ಪದಾರ್ಥಗಳನ್ನು ತಿಂದು ಇತರ ವಸ್ತುಗಳನ್ನು ತುಳಿದು ನಾಶ ಪಡಿಸಿದ್ದು, ಹಾಡಿ ನಿವಾಸಿಗಳು ಭಯಭೀತರಾಗಿದ್ದಾರೆ.

ಹಾಡಿಯ ಕಾವೇರಿ ಅವರ ಮನೆ ಆವರಣಕ್ಕೆ ದಾಳಿ ಇಟ್ಟ ಆನೆ ದಾಂಧಲೆ ನಡೆಸಿದೆ. ಭಾನುವಾರ ಬೆಳಗಿನ ಜಾವ ಮತ್ತೆ ಬಂದ ಕಾಡಾನೆ ಮನೆಯ ಛಾವಣಿ ಶೀಟುಗಳನ್ನು ತುಳಿದು ನಾಶ ಮಾಡಿದೆ.

ಈ ಹಿಂದೆ ಎರಡು ಬಾರಿ ಕಾಡಾನೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಭಯಭೀತರಾಗಿದ್ದ ಮನೆಯವರು ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಮಲಗಲು ತೆರಳಿದ್ದರು. ಬೆಳಗ್ಗೆ ಬಂದು ನೋಡಿದ ಸಂದರ್ಭ ಕಾಡಾನೆ ದಾಳಿ ಮಾಡಿರುವುದು ತಿಳಿದುಬಂದಿದೆ. ಈ ಹಿಂದೆಯೂ ಮನೆಯಲ್ಲಿ ಮಲಗಿದ್ದ ಸಂದರ್ಭ ಕಾಡಾನೆ ದಾಳಿಗೆ ಯತ್ನಿಸಿತ್ತು. ಮನೆಯಲ್ಲಿದ್ದವರು ಕಿರುಚಿಕೊಂಡಾಗ ಆನೆ ಸ್ಥಳದಿಂದ ತೆರಳಿತ್ತು.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪಂಚಾಯಿತಿಯಿಂದ ಅಹಾರ ಕಿಟ್ ವಿತರಣೆ ಮಾಡಿದರು. ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಿ ಕಾಡಾನೆ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.