ಜಿಲ್ಲೆ

ಮನೆ ಹಂಚಿಕೆಯಲ್ಲಿ ಗೋಲ್‌ಮಾಲ್

ಸುನಿಲ್ ಪೊನ್ನೇಟಿ

ಮಡಿಕೇರಿ:

ಎಲ್ಲರಿಗೂ ಸೂರು ಎನ್ನುವುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಬೇರೆ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಇಲ್ಲಿಯೂ ದುರುಪಯೋಗ ವ್ಯಾಪಕವಾಗಿದ್ದು, ಕೊಡಗಿನಲ್ಲಿ ಇಂತಹ ೪೨ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ೧೯ ಮನೆಗಳಿಗೆ ಅನುದಾನ ತಡೆಹಿಡಿಯಲಾಗಿದೆ.

’ಎಲ್ಲರಿಗೂ ಮನೆ, ನಿವೇಶನ ರಹಿತರಿಗೆ ನಿವೇಶನ’ ಎನ್ನುವುದು ಚುನಾವಣೆ ಸಮಯದಲ್ಲಿ ರಾಜಕಾರಣಿಗಳ ಜನಪ್ರಿಯ ಆಶ್ವಾಸನೆಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ಸ್ವಂತದ್ದು ಒಂದು ಮನೆ ಇರಬೇಕು ಎನ್ನುವುದು ಎಲ್ಲರ ಕನಸು. ಆದರೆ ಬಡತನ ಸೇರಿದಂತೆ ವಿವಿಧ ಕಾರಣಗಳಿಂದ ಈ ಕನಸು ಈಡೇರಿಸಿಕೊಳ್ಳಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಯೋಜನೆಗಳ ದುರುಪಯೋಗ ತಪ್ಪಿಸಲು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನೂ ತೆಗೆದುಕೊಂಡಿದೆ. ಆದರೆ ಇದರಲ್ಲಿನ ಚಿಕ್ಕ ಪುಟ್ಟ ಲೋಪಗಳನ್ನು ದುರುಪಯೋಗಪಡಿಸಿಕೊಂಡು ಕೆಲವರು ಇಲ್ಲಿಯೂ ಅಕ್ರಮ ನಡೆಸುತ್ತಿದ್ದಾರೆ. ಇದರಿಂದಾಗಿ ಅರ್ಹರು ಯೋಜನೆಯಿಂದ ವಂಚಿತರಾಗುವಂತಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆಗಳನ್ನು ಕೊಡಲು ಸರ್ಕಾರ ಬಸವ ವಸತಿ, ಡಾ. ಅಂಬೇಡ್ಕರ್ ನಿವಾಸ್, ದೇವರಾಜ ಅರಸು ವಸತಿ, ವಾಜಪೇಯಿ ನಗರ ವಸತಿ, ಪ್ರಧಾನಮಂತ್ರಿ ಆವಾಸ್ ಹೀಗೆ ಹಲವು ಯೋಜನೆಗಳನ್ನು ರೂಪಿಸಿದೆ. ವಿವಿಧ ಇಲಾಖೆ, ನಿಗಮ, ಮಂಡಳಿಗಳ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಫಲಾನುಭವಿಗಳನ್ನು ಗುರುತಿಸಿ ಪಾರದರ್ಶಕವಾಗಿ ಯೋಜನೆ ಜಾರಿಯ ರೂಪುರೇಷೆ ಸರ್ಕಾರದ ಮಟ್ಟದಲ್ಲಿ ಆಗಿದ್ದರೂ ಕೆಲವು ದಂಧೆಕೋರರು ಇಲ್ಲೂ ಅಕ್ರಮ ಮಾರ್ಗಗಳನ್ನು ಹುಡುಕಿ ಅಧಿಕಾರಿಗಳ ಸಹಾಯದಿಂದ ಯೋಜನೆಯ ದಾರಿ ತಪ್ಪಿಸುವ ಕೆಲಸ ನಡೆಸಿದ್ದಾರೆ.

ಕೊಡಗಿನಲ್ಲಿ ೨೦೨೧, ೨೨ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮೀಣ ನಿವಾಸ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೯೦೯ ಮನೆಗಳು ಆಯ್ಕೆ ಆಗಿದ್ದವು. ಈ ಪೈಕಿ ೯೨ ಮನೆಗಳು ಮಾತ್ರ ಪೂರ್ಣಗೊಂಡಿವೆ. ೪೫೯ ಮನೆಗಳು ನಿರ್ಮಾಣ ಹಂತದಲ್ಲಿದೆ. ೩೪೫ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರುವಾಗಿಲ್ಲ. ೭ ಮನೆಗಳನ್ನು ತಡೆಹಿಡಿಯಲಾಗಿದೆ. ೨೦೨೧, ೨೨ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಗರ ನಿವಾಸ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ೫೯ ಮನೆಗಳು ಮಂಜೂರಾಗಿದ್ದವು. ಇದರಲ್ಲಿ ೩ ಮನೆಗಳು ಮಾತ್ರ ಪೂರ್ಣಗೊಂಡಿದೆ. ೧೭ ಮನೆಗಳು ನಿರ್ಮಾಣ ಹಂತದಲ್ಲಿದೆ. ೩೯ ಮನೆಗಳ ನಿರ್ಮಾಣ ಇನ್ನು ಕೂಡ ಶುರುವಾಗಿಲ್ಲ.

ಬಸವ ಹೌಸಿಂಗ್ ಯೋಜನೆ ಅಡಿಯಲ್ಲಿ ೨೦೨೧, ೨೨ನೇ ಸಾಲಿನಲ್ಲಿ ಕೊಡಗಿಗೆ ೨,೧೬೩ ಮನೆಗಳು ಆಯ್ಕೆ ಆಗಿದ್ದವು. ೪೧೨ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ೧೧೬೩ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ೫೭೬ ಮನೆಗಳ ನಿರ್ಮಾಣ ಕೆಲಸ ಇನ್ನೂ ಶುರುವಾಗಿಲ್ಲ. ೧೨ ಮನೆಗಳ ನಿರ್ಮಾಣ ಕಾರ್ಯ ತಡೆಹಿಡಿಯಲಾಗಿದೆ. ದೇವರಾಜ ಅರಸು ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ೨೦೨೧,೨೨ನೇ ಸಾಲಿಗೆ ಜಿಲ್ಲೆಗೆ ೫ ಮನೆಗಳು ಆಯ್ಕೆ ಆಗಿದೆ. ೧ ಮನೆ ಪೂರ್ಣವಾಗಿದ್ದು, ೧ ಮನೆ ನಿರ್ಮಾಣ ಹಂತದಲ್ಲಿದೆ. ೩ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ವಾಜಪೇಯಿ ನಗರ ನಿವಾಸ್ ಯೋಜನೆ ಅಡಿಯಲ್ಲಿ ಕೊಡಗಿಗೆ ೨೦೨೧,೨೨ನೇ ಸಾಲಿಗೆ ೧೮೬ ಮನೆಗಳು ಮಂಜೂರಾಗಿದ್ದು, ೭ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ೫೬ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ೧೨೩ ಮನೆಗಳ ಕೆಲಸ ಇನ್ನಷ್ಟೇ ಶುರುವಾಗಬೇಕಿದೆ. ಪಿಎಂಎವೈಜಿ ಯೋಜನೆ ಅಡಿಯಲ್ಲಿ ಜಿಲ್ಲೆಗೆ ೨೦೨೧,೨೨ರಲ್ಲಿ ಮಂಜೂರಾಗಿರುವ ೨ ಮನೆಗಳ ಪೈಕಿ ಒಂದು ಪೂರ್ಣವಾಗಿದ್ದು, ಇನ್ನೊಂದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಿಎಂಎವೈಯು ಬಿಲ್‌ಸಿ ಯೋಜನೆಯಲ್ಲಿ ಕೊಡಗಿಗೆ ೨೦೨೧,೨೨ನೇ ಸಾಲಿನಲ್ಲಿ ೨೫ ಮನೆಗಳು ಮಂಜೂರಾಗಿದ್ದು, ೩ ಮನೆಗಳ ನಿರ್ಮಾಣ ಪೂರ್ಣವಾಗಿದೆ. ೮ ಮನೆ ಪ್ರಗತಿಯಲ್ಲಿದ್ದು, ಇನ್ನು ೧೪ರ ನಿರ್ಮಾಣ ಕಾರ್ಯ ಶುರುವಾಗಿಲ್ಲ. ಪಿಎಂಎವೈಯು ಎಎಚ್‌ಪಿ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ ಜಿಲ್ಲೆಗೆ ಮಂಜೂರಾದ ೮ ಮನೆಗಳ ಪೈಕಿ ಎಲ್ಲಾ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಸರ್ಕಾರದ ನಿಯಮಗಳ ಪ್ರಕಾರ ಸರ್ಕಾರ ಪ್ರತಿ ಮನೆಗೆ ನೀಡುವ ಸಹಾಯಧನದ ಜೊತೆಗೆ ಫಲಾನುಭವಿಗಳ ಸ್ವಂತ ವಂತಿಕೆ ಹಣವನ್ನು ಉಪಯೋಗಿಸಿಕೊಂಡು ಗರಿಷ್ಮ ೫ ಲಕ್ಷ ರೂ. ತನಕ ಮನೆ ನಿರ್ಮಿಸಿಕೊಳ್ಳಲು ಅವಕಾಶ ಇದೆ. ಆದರೆ ಕೆಲವು ಫಲಾನುಭವಿಗಳು ೬ ರಿಂದ ೨೦ ಲಕ್ಷಕ್ಕೂ ಹೆಚ್ಚು ಅನುದಾನ ವಿನಿಯೋಗಿಸಿ ಮನೆ ನಿರ್ಮಿಸುತ್ತಿರುವ ಕಾರಣ, ಅನರ್ಹರಂದು ಪರಿಗಣಿಸಿ ಅನುದಾನವನ್ನು ತಡೆಹಿಡಿಯಲಾಗುತ್ತದೆ. ಕೊಡಗಿನಲ್ಲಿ ಇಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ.

ವಾಸಕ್ಕೆ ಈಗಾಗಲೇ ಸ್ವಂತ ಮನೆ ಹೊಂದಿರುವ ಫಲಾನುಭವಿ ತನ್ನ ಮನೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದರೆ ಅಂತಹ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಅನುದಾನವನ್ನು ತಡೆಹಿಡಿಯಲಾಗುತ್ತದೆ. ಜಿಲ್ಲೆಯಲ್ಲಿ ಇಂತಹ ೧೩ ಪ್ರಕರಣಗಳು ಕಂಡುಬಂದಿದೆ. ಮನೆ ನಿರ್ಮಾಣ ಸಂದರ್ಭ ಹಂತವಾರು ಛಾಯಾಚಿತ್ರಗಳನ್ನು ಜಿಪಿಎಸ್‌ಗೆ ಅಳವಡಿಸಬೇಕಾಗುತ್ತದೆ. ಆದರೆ ಹಲವು ವರ್ಷದ ಹಿಂದೆ ನಿರ್ಮಿಸಿರುವ ಹಳೆ ಮನೆಗಳನ್ನು ಜಿಪಿಎಸ್‌ಗೆ ಅಳವಡಿಸಿರುವ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ೪ ಹಂತದ ಜಿ.ಪಿ.ಎಸ್. ಛಾಯಾಚಿತ್ರಗಳನ್ನು ಅಳವಡಿಸದೇ, ಹಾಲಿ ಇರುವ ಮನೆಯನ್ನೇ ಜಿ.ಪಿ.ಎಸ್.ಗೆ ಅಳವಡಿಸಿರುವ ಕಾರಣ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಅನುದಾನವನ್ನು ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲಿ ಇಂತಹ ೨೯ ಪ್ರಕರಣಗಳು ಕಂಡುಬಂದಿದೆ. ನಿರ್ಮಿಸುತ್ತಿರುವ ಮನೆಯನ್ನು ವಾಸೇತರ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದಾಗಿ ಕಂಡು ಬಂದ ಅಂತಹ ಫಲಾನುಭವಿಗಳು ಅನರ್ಹರೆಂದು ಪರಿಗಣಿಸಿ ಅನುದಾನ ತಡೆಹಿಡಿಯಲಾಗುತ್ತದೆ.

ಕಳೆದ ೫ ವರ್ಷಗಳಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು ೨೧,೪೧೩ ಮನೆಗಳನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿದೆ. ಭೌತಿಕ ಮನೆಗಳನ್ನು ತಾತ್ಕಲಿಕವಾಗಿ ಪ್ರಗತಿಯಾದರೂ ವಿವಿಧ ವಸತಿ ಯೋಜನೆಗಳಡಿ ನಿಯಮಾನುಸಾರ ನಿರ್ಮಾಣವಾಗದ ಒಟ್ಟು ೫,೪೫೩ ಮನೆಗಳ ಫಲಾನುಭವಿಗಳನ್ನು ವಿವಿಧ ಕಾರಣಗಳಿಂದ ಅನರ್ಹಗೊಳಿಸಿ, ಅನುದಾನವನ್ನು ತಡೆಹಿಡಿಯಲಾಗಿದೆ. ಒಂದು ವೇಳೆ ವಾಸ್ತವಿಕವಾಗಿ ನಿರ್ಮಾಣಗೊಂಡಿರುವ ಮನೆ ಅರ್ಹವಿರುವುದು ಕಂಡುಬಂದಲ್ಲಿ ಸ್ಥಳೀಯ ಸಂಸ್ಥೆ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳ ದೃಢೀಕರಣದೊಂದಿಗೆ, ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಜಿಲ್ಲಾಡಳಿತವು ಆನ್‌ಲೈನ್ ಮೂಲಕ ಸಲ್ಲಿಸಿದರೆ, ಪರಿಶೀಲಿಸಿ, ಅರ್ಹರಿದ್ದಲ್ಲಿ ಅನುದಾನ ಬಿಡುಗಡೆಗೊಳಿಸಲು ಕೂಡ ಅವಕಾಶ ಇದೆ.
ಬಿ.ಝಡ್. ಜಮೀರ್ ಅಹಮ್ಮದ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ