ಮಾನ್ವಿ: ತಾಲೂಕಿನ ಕಾತರಕಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಾಳಿ, ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟರೆ, ಬಾಲಕಿ ಗಾಯಗೊಂಡಿದ್ದಾಳೆ.
ತಾಯಮ್ಮ (38) ಮೃತೆ. ಸುಮಿತ್ರಾ (16) ಗಾಯಾಳು. ರಾತ್ರಿ ಮಲಗಿದ್ದ ವೇಳೆ ಗಾಳಿ, ಮಳೆಗೆ ಮನೆಯ ಅರ್ಧದಷ್ಟು ಗೊಡೆ ತಾಯಮ್ಮ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ತಾಯಮ್ಮ ಪತಿಯ ಸಹೋದರನ ಮಗಳು ಸುಮಿತ್ರಾ ಕಾಲಿಗೆ ಬಲವಾದ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರಿಗೆ ಪತಿ, ಪುತ್ರಿ ಇದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಭೇಟಿ: ವಿಷಯ ತಿಳಿದು ಶಾಸಕ ಜಿ.ಹಂಪಯ್ಯ ನಾಯಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸುಮಿತ್ರಾ ಆರೋಗ್ಯ ವಿಚಾರಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಡಾ.ಶರಣಪ್ಪಗೆ ಸೂಚಿಸಿದರು. ಮೃತರ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಕಾತರಕಿ ನರಸಿಂಹ ಇತರರಿದ್ದರು.