ಬೆಂಗಳೂರು: ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು, ಆಕೆಯ ಜತೆ ಸಲುಗೆ ಬೆಳೆಸಿದ್ದ ಕುಖ್ಯಾತ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (32) ಮೇಲೆ ಆತನ ಸ್ನೇಹಿತರೇ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ಗಾಯಾಳು ಎಸ್ಕೇಪ್ ಕಾರ್ತಿಕ್ ನೀಡಿದ ದೂರಿನ ಮೇರೆಗೆ ರಾಜಕುಮಾರ್, ಅಭಿಷೇಕ್, ಗೌತಮ್ ಮತ್ತು ಪ್ರಶಾಂತ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರ್ತಿಕ್ ವಿರುದ್ಧ ನಗರದ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಿವೆ. ಮನೆಗಳ್ಳತನ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿನಿಂದ ತಪ್ಪಿಸಿಕೊಳ್ಳುವ ಮೂಲಕ ಎಸ್ಕೇಪ್ ಕಾರ್ತಿಕ್ ಎಂದು ಕುಖ್ಯಾತಿ ಪಡೆದಿದ್ದ. ಕೆಲವು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಐದು ವರ್ಷಗಳ ಹಿಂದೆ ಹೆಣ್ಣೂರಿನ ರಾಜಕುಮಾರ್ ಎಂಬಾತನ ಪರಿಚಯವಾಗಿತ್ತು. ಆಗಾಗ ಆತನ ಮನೆಗೆ ಹೋಗಿ ಬರುತ್ತಿದ್ದ. ಈ ವೇಳೆಯೇ ಕಾರ್ತಿಕ್‌ಗೆ ಆತನ ಅಕ್ಕ ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಪ್ರೀತಿಸತೊಡಗಿದ್ದು, ಸಲುಗೆ ಬೆಳೆದಿತ್ತು. ಈ ವಿಚಾರ ರಾಜಕುಮಾರ್‌ಗೆ ಗೊತ್ತಾಗಿದ್ದು, ಇದಕ್ಕೆ ವಿರೋಧಿಸಿದ್ದ. ಅಕ್ಕನ ಜೊತೆಗಿನ ಸಲುಗೆ ಬಿಡುವಂತೆ ಕಾರ್ತಿಕ್‌ಗೆ ಎಚ್ಚರಿಕೆ ನೀಡಿದ್ದ. ಇದಕ್ಕೆ ಸೊಪ್ಪು ಹಾಕದ ಕಾರ್ತಿಕ್, ರಾಜಕುಮಾರ್‌ನ ಕಣ್ತಪ್ಪಿಸಿ ಆತನ ಅಕ್ಕನನ್ನು ಭೇಟಿ ಮಾಡುತ್ತಿದ್ದ. ಇದರಿಂದ ಕುಪಿತನಾಗಿದ್ದ ರಾಜಕುಮಾರ್ ಕಾರ್ತಿಕ್‌ಗೆ ಬುದ್ಧಿ ಕಲಿಸಲು ತೀರ್ಮಾನಿಸಿದ್ದ.
ಕಾರ್ತಿಕ್ ಡಿ. 5ರಂದು ರಾತ್ರಿ 11.30ರಲ್ಲಿ ಬೈರತಿ ಕ್ರಾಸ್ ಬಳಿ ಆಟೋಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ. ಈ ವೇಳೆ ತನ್ನ ಸಹಚರರ ಜತೆ ಕಾರಿನಲ್ಲಿ ಹೋಗಿದ್ದ ರಾಜಕುಮಾರ್, ಏಕಾಏಕಿ ಕಾರ್ತಿಕ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಾರ್ತಿಕ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೃತ್ಯಕ್ಕೆ ಸಂಬಂಧಿಸಿದಂತೆ ಗಾಯಾಳು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.