ಸಾಂದರ್ಭಿಕ ಚಿತ್ರ  
ಜಿಲ್ಲೆ

ಬಾಡಿಗೆಗೆ ಕೊಟ್ಟಿದ್ದ ಮನೆಯಲ್ಲಿ ಮಾಲೀಕನಿಂದಲೇ ಕಳವು!; ಸಿಸಿಟಿವಿಯಲ್ಲಿ ಸೆರೆಯಾಯ್ತು ಮಹಿಳೆಯೊಂದಿಗೆ ಮನೆಹೊಕ್ಕಿದ್ದ ದೃಶ್ಯ

ಬೆಂಗಳೂರು: ಮನೆ ಮಾಲೀಕನೇ ಬಾಡಿಗೆ ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಟೆಕ್ಕಿಯೊಬ್ಬರು ಜೀವನ್‌ಬಿಮಾ ನಗರ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

ಕೊಡಿಗೆಹಳ್ಳಿಯ ನಿವಾಸಿ, ಜಾರ್ಖಂಡ್ ಮೂಲದ ಸೌರವ್ ಸುಮನ್ ಕೊಟ್ಟ ದೂರಿನ ಆಧಾರದ ಮೇಲೆ ಮನೆ ಮಾಲೀಕ ಸೋಮಶೇಖರ್ ವಿರುದ್ಧ ಜೀವನ್‌ಬಿಮಾ ನಗರ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡಿದ್ದಾರೆ.

ಸೌರವ್ ನಗರದ ಪ್ರತಿಷ್ಠಿತ ಸಾಫ್ಟ್​ವೇರ್​ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಬಾಡಿಗೆಗೆ ಇದ್ದ ಮನೆಗೆ ಬೀಗ ಹಾಕಿ ಕುಟುಂಬ ಸಮೇತರಾಗಿರಾಗಿ ಜಾರ್ಖಂಡ್‌ಗೆ ತೆರಳಿದ್ದರು. ಆ.29ರಂದು ಬೆಂಗಳೂರಿಗೆ ವಾಪಸ್ಸಾದ ಸೌರವ್ ಮನೆಗೆ ಬಂದು ನೋಡಿದಾಗ ಚಿನ್ನದ ಒಡವೆ ಹಾಗೂ ಇತರ ವಸ್ತುಗಳು ಕಳವಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಮನೆ ಮಾಲೀಕ ಸೋಮಶೇಖರ್ ಅವರನ್ನು ಕೇಳಿದಾಗ ಆ ಒಡವೆಗಳನ್ನು ತಾನು ತೆಗೆದಿಟ್ಟಿದ್ದು ಅವುಗಳನ್ನು ಕೊಡುವುದಾಗಿ ಹೇಳಿದ್ದ.

ಇದಾಗಿ ಎರಡು ದಿನಗಳಾದರೂ ಸೋಮಶೇಖರ್ ಒಡವೆಗಳನ್ನು ಹಿಂದಿರುಗಿಸಿರಲಿಲ್ಲ. ಮನೆ ಬಳಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಸೋಮಶೇಖರ್ ಮತ್ತೊಬ್ಬ ಮಹಿಳೆಯೊಂದಿಗೆ ಮನೆಯೊಳಗೆ ತೆರಳಿರುವುದು ಕಂಡು ಬಂದಿತ್ತು. ಸೋಮಶೇಖರ್ ತಮ್ಮ ಬಳಿಯಿದ್ದ ಮತ್ತೊಂದು ಕೀ ಬಳಸಿ ಚಿನ್ನಾಭರಣ ಲಪಟಾಯಿಸಿದ್ದಾರೆ ಎಂದು ಸೌರವ್ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮಶೇಖರ್ ಅವರಿಂದ ಒಡವೆಗಳನ್ನು ಸೌರವ್‌ಗೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.