ಮಹಾಲಿಂಗಪುರ: ಪಟ್ಟಣದ ಬರಗಿ ಓಣಿ ನಿವಾಸಿ, ಜಮಖಂಡಿ ನಗರಸಭೆ ಲೇಖಪಾಲ ಬಾಬುರಾವ ರಾಮಪ್ಪ ಕಮತಗಿ ಅವರ ಮನೆಯಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಕಳ್ಳರು ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಮಲಗುವ ಕೋಣೆಯ ಬೀರುವಿನಲ್ಲಿದ್ದ 2.45ಲಕ್ಷ ರೂ. ಮೌಲ್ಯದ 70 ಗ್ರಾಂ ಮಂಗಳ ಸೂತ್ರ, 4.55 ಲಕ್ಷ ರೂ. ಮೌಲ್ಯದ 130 ಗ್ರಾಂ ವೆಂಕಿ, 2,27,500 ರೂ. ಮೌಲ್ಯದ 65 ಗ್ರಾಂ ಬಾಜು ಬಂದಿ, 70 ಸಾವಿರ ರೂ. ಮೌಲ್ಯದ 20 ಗ್ರಾಂ ಬ್ರಾಸ್‌ಲೈಟ್, 52,500 ರೂ. ಮೌಲ್ಯದ 15 ಗ್ರಾಂ ಉಂಗುರ ಕಳುವಾಗಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ದಾಖಲಿಸಲಾಗಿದೆ.
ಅಪರಾಧ ವಿಭಾಗದ ಪಿಎಸ್‌ಐ ಮಧು ಎಲ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಮಹಾಂತೇಶ ಜಿದ್ದಿ, ಸಿಪಿಐ ಸಂಜೀವ ಬಳಿಗಾರ, ಠಾಣಾಧಿಕಾರಿ ಕಿರಣ ಸತ್ತಿಗೇರಿ ಭೇಟಿ ನೀಡಿ ಪರಿಶೀಲಿಸಿದರು.