ಜಿಲ್ಲೆ

ಗುಡಿಸಲಲ್ಲಿದ್ದವರಿಗೆ ಪಂಚಾಯಿತಿಯಿಂದ ಮನೆ ಭಾಗ್ಯ: ದಂಪತಿಯ ಸ್ಥಿತಿ ಕಂಡು ಮರುಗಿದ್ದ ಪಡುಪಣಂಬೂರು ಗ್ರಾಪಂ ಆಡಳಿತ : 19ರಂದು ಹಸ್ತಾಂತರ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡಿದರೆ ಯಾವುದೇ ಕಾರ್ಯ ಕಷ್ಟವಲ್ಲ ಎಂಬ ಮಾತನ್ನು ಪಡುಪಣಂಬೂರು ಪಂಚಾಯಿತಿ ಸಾಧಿ ತೋರಿಸಿದೆ.

ಮುರಿದ ಹಳೆಯ ಸಿಮೆಂಟ್ ಶೀಟುಗಳ ಆಧಾರದ ಗೋಡೆ, ಮರದ ತುಂಡುಗಳ ಆಧಾರದಲ್ಲಿರುವ ಪ್ಲಾಸ್ಟಿಕ್ ಶೀಟ್ ಛಾವಣಿ, ಸಣ್ಣ ಗಾಳಿ ಮಳೆಗೂ ಧರಾಶಾಯಿಯಾಗಲು ಕಾಯುತ್ತಿರುವ ಶಿಥಿಲ ಸಣ್ಣ ಮನೆಯಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಪಡುಪಣಂಬೂರು ಗ್ರಾಮದ ಕಂಬಳಬೆಟ್ಟುವಿನ ಯಮುನಾ ಮತ್ತು ನಾರಾಯಣ ದಂಪತಿಗೆ 2 ತಿಂಗಳ ಅವಧಿಯಲ್ಲಿ ದಾನಿಗಳ ನೆರವಿನೊಂದಿಗೆ ಉತ್ತಮ ಮನೆ ನಿರ್ಮಿಸಿ ಪಂಚಾಯಿತಿ ನೀಡಿದೆ.

80 ವರ್ಷ ಪ್ರಾಯದ ಪರಿಶಿಷ್ಟ ಪಂಗಡದ ನಾರಾಯಣ ಪರಿಸರದಲ್ಲಿ ಸೋನೆ ಎಂದೇ ಪರಿಚಿತರು. ಬಹಳ ಮುಗ್ಧ ವ್ಯಕ್ತಿತ್ವದ ದಂಪತಿಗೆ ವಸತಿ ಯೋಜನೆ ಸಹಿತ ಸರ್ಕಾರಿ ಸವಲತ್ತು ನೀಡಲು ದಾಖಲೆಗಳ ಕೊರತೆ ಸಂದರ್ಭ ಎರಡು ತಿಂಗಳ ಹಿಂದೆ ಅವರ ಮನೆಗೆ ಭೇಟಿ ನೀಡಿದ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಮತ್ತು ಉಪಾಧ್ಯಕ್ಷ ಹೇಮನಾಥ ಅಮೀನ್, ದಂಪತಿಗೆ ಒಂದು ಸುಸಜ್ಜಿತ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡರು. ಅವರ ನೇತೃತ್ವದಲ್ಲಿ ಪಂಚಾಯಿತಿ ಸಹಾಯಧನ ಸಹಿತ ವಿವಿಧ ಸಂಘ-ಸಂಸ್ಥೆ ಹಾಗೂ ದಾನಿಗಳ ಸಹಕಾರದಿಂದ 4 ಲಕ್ಷ ರೂ.ವೆಚ್ಚದಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಇರುವ ಹೆಂಚು ಛಾವಣಿಯ ಮನೆ ನಿರ್ಮಾಣವಾಗಿದ್ದು ಮೇ 16ರಂದು ಗೃಹಪ್ರವೇಶ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ದಯನೀಯ ಸ್ಥಿತಿಯಲ್ಲಿದ್ದ ಸೋನೆ ಕುಟುಂಬವನ್ನು ಮೇಲಕ್ಕೆತ್ತಿದ ಶ್ರೇಯಸ್ಸು ಪಡುಪಣಂಬೂರು ಪಂಚಾಯಿತಿಗೆ ಲಭಿಸಿದ್ದು ಎಲ್ಲ ಪಂಚಾಯಿತಿ ಈ ಕಾರ್ಯವನ್ನು ಆದರ್ಶವಾಗಿ ತೆಗೆದುಕೊಂಡರೆ ಸಮಾಜದ ಉದ್ಧಾರ ಸಾಧ್ಯವಿದೆ.

ಎರಡು ತಿಂಗಳ ಹಿಂದೆ ದಂಪತಿಯ ಮನೆಗೆ ಭೇಟಿ ನೀಡಿದಾಗ ಅವರ ಸ್ಥಿತಿ ಕಂಡು ಮರುಕ ಉಂಟಾಗಿತ್ತು. ದಾನಿಗಳು ಹಾಗೂ ಪಂಚಾಯಿತಿ ಸದಸ್ಯರ ಸಹಕಾರ ಪಡೆದು ಪಂಚಾಯಿತಿ ವತಿಯಿಂದ ಮನೆ ನಿರ್ಮಿಸಲಾಗಿದೆ. ಕುಸುಮಾ ಚಂದ್ರಶೇಖರ್ ಅಧ್ಯಕ್ಷೆ ಪಡುಪಣಂಬೂರು ಪಂಚಾಯಿತಿ ಪರಿಶಿಷ್ಟ ಪಂಗಡದವರಾಗಿದ್ದರೂ ದಾಖಲೆ ಕೊರತೆಯಿಂದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿದ್ದಾರೆ. ಸುಧೀರ್ ಅಭಿವೃದ್ಧಿ ಅಧಿಕಾರಿ ಪಡುಪಣಂಬೂರು ಪಂಚಾಯಿತಿ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೆವು. ಮನೆ ಶಿಥಿಲವಾಗಿ ಬೀಳುವ ಹಂತದಲ್ಲಿತ್ತು. ನಮಗೆ ಮನೆ ನಿರ್ಮಿಸಿಕೊಟ್ಟ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ. ನಾರಾಯಣ(ಸೋನೆ) ಮನೆ ಪಡೆದುಕೊಂಡ ಫಲಾನುಭವಿ https://www.vijayavani.net/chappara-muhurta https://www.vijayavani.net/alvas-champion-in-tug-of-war-competition