ವಿಜಯಪುರ: ಸಿಂದಗಿ ಪಟ್ಟಣದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಮನೆಗಳ ತೆರವು ಪ್ರಕರಣವನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹರಿಹಾಯ್ದರು.
ಒಟ್ಟು 84 ಕುಟುಂಬಗಳಿರುವ ಮನೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸಲಾಗಿದೆ. ಆದರೆ, ಅಲ್ಲಿನ ಕಾಂಗ್ರೆಸ್ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರಾಶ್ರಿತರ ಪರವಾಗಿದ್ದಾರೆ. ಕಾಂಗ್ರೆಸ್ ಯಾವಾಗಲೂ ಬಡವರ ಪರವಾಗಿದ್ದು, ನಿರಾಶ್ರಿತರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಕಲ್ಪಿಸಲು ಪ್ರಯತ್ನಶೀಲವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪುರಸಭೆ ಕೊಟ್ಟಿರುವ ಜಾಗದ ವ್ಯಾಜ್ಯ ಸುಮಾರು ದಿನಗಳಿಂದ ನ್ಯಾಯಾಲಯದಲ್ಲಿತ್ತು. ಈಗ ನ್ಯಾಯಾಲಯವು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಜಾಗ ಸೇರಿದೆ ಎಂದು ತೀರ್ಪು ಕೊಟ್ಟಿದೆ. ಈ ಕುರಿತ ದಾಖಲೆಗಳನ್ನು ಪರಿಶೀಲನೆ ಮಾಡಿಯೇ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಶಾಸಕ ಅಶೋಕ ಮನಗೂಳಿ ಅವರು ನಿರಾಶ್ರಿತರಿಗೆ ಪರಿಹಾರ ಕಲ್ಪಿಸಲು ಮುಂದಾಗಿದ್ದಾರೆ. ಮಾತ್ರವಲ್ಲ, ಮನಗೂಳಿ ಫೌಂಡೇಶನ್‌ನಿಂದ 25 ಸಾವಿರ ರೂ. ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆರಂಭದಲ್ಲಿ ಕುಟುಂಬಸ್ಥರು ಸಹ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಬಿಜೆಪಿಯವರು ರಾಜಕೀಯಗೊಳಿಸಿ, ನಿರಾಶ್ರಿತರು ಹೋರಾಟ ಮುಂದುವರೆಸಲು ಕಾರಣರಾಗಿದ್ದಾರೆ ಎಂದರು.
ನಿರಾಶ್ರಿತರಿಗೆ ದಾರಿ ತಪ್ಪಿಸುವುದನ್ನು ಬಿಟ್ಟು ಪಕ್ಷಾತೀತರವಾಗಿ ಅವರಿಗೆ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಕೈಜೋಡಿಸುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಶಾಸಕರು, ಸಚಿವರು ಹಾಗೂ ಸರ್ಕಾರಕ್ಕೆ ಬೈಯುವುದಿಂದ ಯಾವುದೇ ಲಾಭವಾಗುವುದಿಲ್ಲ ಎಂದರು.
ಮುಖಂಡರಾದ ವೈಜನಾಥ ಕರ್ಪೂರಮಠ, ಚಾಂದಸಾಬ್ ಗಡಗಲಾವ, ಕೃಷ್ಣ ಕಾಮಟೆ, ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ ಇದ್ದರು.