ಜಿಲ್ಲೆ

ಮನೆಗೆ ಬೆಂಕಿ ತಗುಲಿ ಹಾನಿ

ಪ್ರಸಿನ್ ಕೆ.ಆರ್

ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಮನೆಯೊಂದರಲ್ಲಿ ಬೆಂಕಿ ತಗುಲಿ ಸಂಪೂರ್ಣ ಹಾನಿಯಾಗಿದ್ದು, ಸ್ಥಳಕ್ಕೆ ಮಂಗಳವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಬೆಂಗಳೂರಿನಲ್ಲಿ ವಾಸವಿರುವ ಗ್ರಾಮದ ಉಮಾಪತಿ ಅವರ ಮನೆಗೆ ಸೋಮವಾರ ಸಂಜೆ ಬೆಂಕಿ ತಗುಲಿ ಛಾವಣಿ ಸಂಪೂರ್ಣ ಸುಟ್ಟು, ಕೆಲ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿತ್ತು. ತಹಸೀಲ್ದಾರ್ ಗುರುಪ್ರಸಾದ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದರು.

ಇದಕ್ಕೆ ತಹಸೀಲ್ದಾರ್‌ಪ್ರತಿಕ್ರಿಯಿಸಿ, ಬೆಂಕಿ ಅವಘಡಗಳಿಗೆ ಇಲಾಖೆಯಿಂದ ಪರಿಹಾರ ನೀಡಲಾಗುವುದಿಲ್ಲ. ಹಾಗಾಗಿ ಈ ಬಗ್ಗೆ ಸಂಬಂಧಪಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ 2021ರಲ್ಲಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರಾಗಿದ್ದು, ಗುರುತಿಸಲಾಗಿದ್ದ ಜಾಗ ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ಇದರಿಂದ ಜಾಗ ಗುರುತಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ತಹಸೀಲ್ದಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರ್‌ಐ ಮಹದೇವಸ್ವಾಮಿ, ತಾಲೂಕು ಸರ್ವೆಯರ್ ಸಿಂಗಾರಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ನಿಂಗರಾಜು ಇತರರು ಇದ್ದರು.