ಜಿಲ್ಲೆ

ಸಹಪಾಠಿಗಾಗಿ ಸ್ನೇಹದ ಮನೆ, ಇಂದು ಕಿಲಿಕೈ ಹಸ್ತಾಂತರ

ಸೌಮ್ಯ ಆರ್

ಕಾಸರಗೋಡು: ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಅನಾರೋಗ್ಯಪೀಡಿತ ತಂದೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಹಪಾಠಿಯೊಬ್ಬರಿಗೆ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಆಶ್ರಯದಲ್ಲಿ ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆ ವತಿಯಿಂದ ಮನೆ ನಿರ್ಮಿಸಿಕೊಟ್ಟಿದೆ. ಶಾಲೆಯ ಎನ್ನೆಸ್ಸೆಸ್ ಸ್ವಯಂಸೇವಕರು ಮನೆ ನಿರ್ಮಾಣಕ್ಕಾಗಿ ಮುಂದೆ ಬಂದಾಗ, ದಾನಿಗಳು, ಹಿತೈಷಿಗಳು ಸಹಕಾರ ನೀಡಿದ್ದು, ಈ ಮೂಲಕ ಸುಸಜ್ಜಿತ ಮನೆ ನಿರ್ಮಾಣಗೊಂಡಿದೆ.

ಚೆಮ್ನಾಡು ಪಂಚಾಯಿತಿಯ ಆಲಿಚೇರಿಯಲ್ಲಿ ಈ ಸ್ನೇಹದ ಮನೆ ನಿರ್ಮಿಸಲಾಗಿದ್ದು, ಮನೆಯ ಕೀಲಿಕೈ ಹಸ್ತಾಂತರ ಜೂನ್ 3ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಶಾಲಾ ವ್ಯವಸ್ಥಾಪಕ ಸಿ.ಟಿ.ಅಹ್ಮದಾಲಿ ಫಲಾನುಭವಿಗೆ ಮನೆಯ ಕೀಲಿಕೈ ಹಸ್ತಾಂತರಿಸುವರು. ಎನ್ನೆಸ್ಸೆಸ್ ರಾಜ್ಯ ಅಧಿಕಾರಿ ಡಾ.ಅನ್ಸಾರ್ ಆರ್.ಎನ್., ಹೈಯರ್ ಸೆಕೆಂಡರಿ ಪ್ರಾದೇಶಿಕ ಉಪನಿರ್ದೇಶಕ ರಾಜೇಶ್ ಕುಮಾರ್ ಆರ್. ಮುಖ್ಯ ಅತಿಥಿಯಾಗಿರುವರು.

ಎನ್ನೆಸ್ಸೆಸ್ ನೇತೃತ್ವದಲ್ಲಿ ಈಗಾಗಲೇ ಅನೇಕ ಸಾಮಾಜಿಕ ಮತ್ತು ಜೀವಕಾರುಣ್ಯ ಚಟುವಟಿಕೆಗಳನ್ನು ನಡೆಸಲಾಗಿದ್ದು, ತನ್ನ ಸಹಪಾಠಿಯೊಬ್ಬನಿಗೆ ಮನೆ ನಿರ್ಮಿಸಿಕೊಡುವ ಮೂಲಕ ಸಮಾಜಕ್ಕೆ ಅದರ್ಶಪ್ರಾಯವಾಗಿದೆ. ಚೆಮ್ನಾಡು ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಿಂದ ನಿರ್ಮಿಸಲಾಗುತ್ತಿರುವ ನಾಲ್ಕನೇ ಮನೆ ಇದು.