ಜಿಲ್ಲೆ

ಮನೆ ಕಳವು ಆರೋಪಿಗಳ ಬಂಧನ

ಬಿಡದಿ : ಮನೆಗಳಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತೆಂಡ್ರಲ್ ನಗರದ ಶ್ರೀನಿವಾಸನ್ (39), ಸಾನಸಂದ್ರಂ ಕಾರ್ತಿಕ್(27), ಶೆಟ್ಟಿ ಉಪೇಂದ್ರ ಬಂಧಿತರು. ಮತ್ತೋರ್ವ ಆರೋಪಿ ಗೋವಿಂದ ತಲೆಮರಿಸಿಕೊಂಡಿದ್ದಾನೆ.

ಬಿಡದಿಯ ಹೆಗ್ಗಡಗೆರೆ ಗ್ರಾಮ ವರದರಾಜು ಅವರ ತೋಟದ ಮನೆಯಲ್ಲಿ 2024ರ ನ.22 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾಗ್ರಿ ಕಳವು ಮಾಡಲಾಗಿತ್ತು. ಈ ಸಂಬಂಧ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಟ್ಟು 6 ಮನೆಯಲ್ಲಿ ಕಳವು ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು 11 ಕೆಜಿ ಬೆಳ್ಳಿ ವಸ್ತುಗಳು, 277 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಕಾರು ಹಾಗೂ ಮಾರಕಸ್ತ್ರ ವಶಕ್ಕೆ ಪಡೆಯಲಾಗಿದೆ.

ಹಲವು ಪ್ರಕರಣ ಬೆಳಕಿಗೆ: ಸಿದ್ದಯ್ಯನದೊಡ್ಡಿ ಗ್ರಾಮದ ಮಂಜಮ್ಮಅವರ ಮನೆಯಲ್ಲಿ 2024 ರ ಫೆ.10 ರಂದು, ಹೊಸದೊಡ್ಡಿ ಗ್ರಾಮದಲ್ಲಿ 2024ರ ಫೆ.23 ರಂದು ವೆಂಕಟೇಶ್ ಮನೆಯಲ್ಲಿ , 2024ರ ಮಾ.3ರಂದು ಹೊಸದೊಡ್ಡಿ ಗ್ರಾಮದ ಮಂಜುನಾಥ್ ಮನೆಯಲ್ಲಿ, 2024ರ ಮಾ.11 ರಂದು ಹೆಜ್ಜಾಲ ಗ್ರಾಮದ ಗೌರಮ್ಮ ಅವರ ಮನೆಯಲ್ಲಿ, 2024 ರ ಆ.10 ರಂದು ಮೇಡನಹಳ್ಳಿ ಗ್ರಾಮದ ಮನೋಜ್ ಕುಮಾರ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು.