ಜಿಲ್ಲೆ

ಮನೆ ಕಳೆದುಕೊಂಡವರಿಗೆ ಮರಳಿ ಆಶ್ರಯ

ಸುನಿಲ್ ಪೊನ್ನೇಟಿ
ಮಡಿಕೇರಿ:
 2018-19ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ಹಂಚಿಕೆಯಾಗದೇ ಉಳಿದ ಮನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಫೆ.19ಕ್ಕೆ ನಡೆಯಲಿದೆ. ಸಂತ್ರಸ್ತ ಕುಟುಂಬಗಳಿಗೆ ‘ಮನೆ ಹಂಚಿಕೆ’ ಅಂದು  ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಲಾಟರಿ ಮುಖಾಂತರ ಆಯ್ಕೆಮಾಡಿ ‘ಹಕ್ಕುಪತ್ರ’ ವಿತರಿಸಲಾಗುವುದು  ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ  ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳನ್ನು ಮೊದಲ ಹಂತದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ಪರಿವೀಕ್ಷಕರು ಹಾಗೂ ತಹಸೀಲ್ದಾರರು ಸ್ಥಳ ಪರಿಶೀಲನಾ ವರದಿ ಪಡೆದ ಬಳಿಕ ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಇವರು ಸಂತ್ರಸ್ತರ ಮನೆಗಳಿಗೆ ಖುದ್ದು ಭೇಟಿ ಮಾಡಿ ಪರಿಶೀಲಿಸಿ ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈಗ ಈ ಪಟ್ಟಿಯನ್ವಯ ಅರ್ಹರಿರುವ ಸಂತ್ರಸ್ತರಿಗೆ ಮನೆ ಹಂಚಿಕೆ ಕಾರ್ಯ ನಡೆಯಲಿದೆ.
ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಸಂಬಂಧ ಯಾವುದಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್ 31ಕ್ಕೆ ಅಂತಿಮ ದಿನಾಂಕ ನಿಗದಿ ಮಾಡಿ ಪ್ರಕಟಣೆ ಹೊರಡಿಸಲಾಗಿತ್ತು. ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಈಗ ಮನೆ ಹಂಚಿಕೆ ಮಾಡಲಾಗುತ್ತಿದೆ.
ಮನೆ ಹಂಚಿಕೆಯಾಗದೇ ಉಳಿದುಕೊಂಡ ಸಂತ್ರಸ್ತರ ಮೊದಲ ಆದ್ಯತಾ ಪಟ್ಟಿಯಲ್ಲಿ 28 ಮಂದಿ, 2ನೇ ಆದ್ಯತಾ ಪಟ್ಟಿಯಲ್ಲಿ 126 ಹಾಗೂ 3ನೇ ಆದ್ಯತಾ ಪಟ್ಟಿಯಲ್ಲಿ 111 ಮಂದಿ ಒಟ್ಟು 265 ಮಂದಿ ಇದ್ದಾರೆ.
ಹಾಗಾಗಿ, ಪಟ್ಟಿಯಲ್ಲಿರುವ ಎಲ್ಲರೂ ಫೆ. 19ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ತಪ್ಪದೇ ಹಾಜರಾಗಿ ಮನೆ ಸಂಖ್ಯೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಈಗಾಗಲೇ ಮಡಿಕೇರಿ ತಾಲೂಕು ಬಿಳಿಗೇರಿಯಲ್ಲಿ 44, ಕರ್ಣಂಗೇರಿಯಲ್ಲಿ 70, ಮದೆಯಲ್ಲಿ 160, ಕೆ.ನಿಡುಗಣೆಯಲ್ಲಿ 152 ಸೋಮವಾರಪೇಟೆ ತಾಲೂಕು ಜಂಬೂರಿನಲ್ಲಿ 379 ಮನೆಗಳು ಹಂಚಿಕೆಯಾಗಿವೆ. ಇದಲ್ಲದೆ ಸಂತ್ರಸ್ತರು ಸ್ವಂತ ಜಾಗದಲ್ಲೇ  ಮನೆ ನಿರ್ಮಿಸಿಕೊಳ್ಳಲು ಇಚ್ಛಿಸಿದ್ದ 83 ಮಂದಿಯ ಪೈಕಿ 80 ಮಂದಿ ಮನೆ ನಿರ್ಮಿಸಿಕೊಂಡಿದ್ದಾರೆ.