ಜಿಲ್ಲೆ

ಬರದ ನಡುವೆ ಬಿಸಿಲಿನ ಬೇಸಿಗೆಯ ಬೇಗೆಯಲ್ಲಿ ಈಜಿನ ಮಜಾ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಬರದ ನಡುವೆ ಸುಡು ಬಿಸಿಲಿನ ಸೆಖೆಯ ಕಿರಿಕಿರಿ ಪರಿಹಾರಕ್ಕೆ ಹೆಚ್ಚಿನ ಜನರು ಈಜುವ ಮೂಲಕ ಮುದ ಅನುಭವಿಸುತ್ತಿದ್ದಾರೆ.

ಪ್ರಸ್ತುತ ಉಷ್ಠಾಂಶ ಸರಾಸರಿ 33 ಡಿಗ್ರಿ ಸೆಲಿಯಷ್ಸ್ ಇದೆ. ಸುಡು ಬಿಸಿಲು ಬೆವರು ತರಿಸುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಹಲವರು ಈಜಲು ಸಮೀಪದ ಬಾವಿ, ಕೆರೆ ಕುಂಟೆಗಳಿಗೆ ತೆರಳುತ್ತಿದ್ದಾರೆ. ತೋಟದ ತೊಟ್ಟಿಗಳಲ್ಲಿನ ನೀರಿನಲ್ಲಿ ಗಂಟೆಗಟ್ಟಲೇ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಜನರು ಕ್ರೀಡಾಂಗಣದ ಈಜುಕೊಳಕ್ಕೆ ಮುಗಿ ಬೀಳುತ್ತಿದ್ದಾರೆ.

ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ 1.30 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಈಜುಕೊಳವನ್ನು ನಿರ್ಮಿಸಿದ್ದು ಚಳಿಗಾಲ ಮತ್ತು ಮಳೆಗಾಲ ಹೊರತುಪಡಿಸಿ ಉಳಿದ ಸಮಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಹೆಚ್ಚಿನ ಜನರು ಬಂದು ಈಜಾಡುತ್ತಿದ್ದಾರೆ. .

*ಶಿಬಿರಗಳಲ್ಲಿ ಈಜು ತರಬೇತಿ

ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ತರಬೇತಿ ಶಿಬಿರಗಳನ್ನು ಕೈಗೊಳ್ಳುತ್ತಿದ್ದು ನೃತ್ಯ, ಗಾಯನ, ಪೇಪರ್ ಕಟ್ಟಿಂಗ್, ಚಿತ್ರಕಲೆಯ ಜತೆಗೆ ವಾರಕ್ಕೆ ಎರಡು ದಿನ ಈಜಿನ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.

*ಬರದಿಂದ ನೀರಿನ ಅಭಾವ

ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲೂ ಸಮರ್ಪಕವಾಗಿ ಮಳೆಯ ಬಿದ್ದಿಲ್ಲ. ವಾರ್ಷಿಕ ವಾಡಿಕೆ ಪ್ರಮಾಣದಲ್ಲಿ ತೀವ್ರ ಕೊರತೆ ಕಂಡು ಬಂದಿದೆ. ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿದ್ದು ಬಾವಿ ಕೆರೆ ಕುಂಟೆಗಳಲ್ಲಿ ನೀರು ಬತ್ತಿ ಹೋಗುತ್ತಿವೆ.

*ಪಾಲಕರಲ್ಲಿ ಆತಂಕ

ಪ್ರಸ್ತುತ ಶಾಲೆಗಳಿಗೆ ಬೇಸಿಗೆ ರಜೆ ಇದೆ. ಇದರ ನಡುವೆ ಅನೇಕ ಮಕ್ಕಳು ಸಮೀಪದ ಬಾವಿ ಕೆರೆ ಕುಂಟೆಗಳಲ್ಲಿ ಈಜಲು ತೆರಳುತ್ತಿದ್ದಾರೆ. ಇದೇ ವೇಳೆ ಪಾಲಕರಲ್ಲಿ ಅವಘಡಗಳ ಆತಂಕ ಕಾಡುತ್ತಿದೆ.

ಹಿಂದೆ ಬೇಸಿಗೆಯಲ್ಲಿ ಶ್ರೀನಿವಾಸ ಸಾಗರ, ದಂಡಿಗಾನಹಳ್ಳಿ ಕೆರೆ ಸೇರಿದಂತೆ ವಿವಿಧೆಡೆ ಈಜಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಹಲವರು ಮೃತಪಟ್ಟ ಪ್ರಕರಣಗಳು ನಡೆದಿವೆ. ಇದರ ಹಿನ್ನೆಲೆಯಲ್ಲಿ ಮಕ್ಕಳನ್ನು ದೂರ ಆಟವಾಡಲು ತೆರಳಲು ಬಿಡುತ್ತಿಲ್ಲ. ಇನ್ನೂ ಅನೇಕ ಶಾಲೆಗಳಲ್ಲೂ ಪರೀಕ್ಷಾ ಅವಧಿಯಲ್ಲಿ ಬೇಸಿಗೆ ರಜೆಯ ಅವಧಿಯಲ್ಲಿನ ಎಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲಾಗಿದೆ.