ಉಡುಪಿ: ಮಠದಬೆಟ್ಟು ಎಂಬಲ್ಲಿ ಕಾಲುಸಂಕದ ಮೇಲಿಂದ ಆಕಸ್ಮಿಕವಾಗಿ ಕಾಲುಜಾರಿ ನೀರು ಹರಿಯುವ ತೋಡಿಗೆ ಬಿದ್ದು ಹೋಟೆಲ್ ಕಾರ್ಮಿಕ ಮೃತಪಟ್ಟಿದ್ದಾರೆ.
ಬೈಂದೂರು ಮೂಲದ ಮಠದಬೆಟ್ಟು ನಿವಾಸಿ ಸತೀಶ್ (೩೩) ಮೃತರು. ಬುಧವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅವರ ಮೃತದೇಹ ಗುರುವಾರ ಮಧ್ಯಾಹ್ನದ ಸುಮಾರಿಗೆ ಮಠದಬೆಟ್ಟು ತೋಡಿನಲ್ಲಿ ಪತ್ತೆಯಾಗಿದೆ. ಸತೀಶ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ ಎಂದು ತಿಳಿಬಂದಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೃತದೇಹವನ್ನು ಮೇಲೆತ್ತಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಘಟನಾ ಸ್ಥಳಕ್ಕೆ ಎಸ್ಪಿ ಅಕ್ಷಯ್ ಮಚ್ಚೇಂದ್ರ, ಎಎಸ್ಪಿ ಸಿದ್ದಲಿಂಗಪ್ಪ ಭೇಟಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿದೆ.
ಶಾಸಕರ ಭೇಟಿ
ಉಡುಪಿ ಮಠದಬೆಟ್ಟು ಸೇತುವೆಯಲ್ಲಿ ಆಕಸ್ಮಿಕವಾಗಿ ಮಳೆ ನೀರು ಹರಿಯುವ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ನಗರ ಸಭಾ ಅಧಿಕಾರಿಗಳೊಂದಿಗೆ ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಗರ ಸಭಾ ವ್ಯಾಪ್ತಿಯ ಎಲ್ಲಾ ಸೇತುವೆ ಹಾಗೂ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಮೃತ ವ್ಯಕ್ತಿಯ ಕುಟುಂಬಕ್ಕೆ ಗರಿಷ್ಠ ಪರಿಹಾರ ಒದಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.