ಮೈಸೂರಿನ ಸಾರ್ವಜನಿಕ ಶೌಚಗೃಹ 
ಜಿಲ್ಲೆ

ಮೈಸೂರಿನಲ್ಲಿ ಸಾರ್ವಜನಿಕ ಬಳಕೆಗೆ ಹೋಟೆಲ್ ಶೌಚಾಗೃಹ ಮುಕ್ತ

ಮೈಸೂರು: ಸ್ವಚ್ಛತೆ ಮತ್ತು ಪ್ರವಾಸೋದ್ಯಮಕ್ಕೆ ದೇಶದಲ್ಲೇ ವಿಶಿಷ್ಟ ಗುರುತನ್ನು ಹೊಂದಿರುವ ನಗರದಲ್ಲಿ ಸಾರ್ವಜನಿಕ ಶೌಚಾಗೃಹಗಳ ಕೊರತೆ ಇನ್ನೂ ಸಂಪೂರ್ಣವಾಗಿ ನೀಗಿಲ್ಲ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರ ಪಾಲಿಕೆ ಇದೀಗ ಹೋಟೆಲ್ ಮತ್ತು ಉಪಾಹಾರ ಗೃಹಗಳ ಸಹಕಾರ ಪಡೆಯಲು ಮುಂದಾಗಿದೆ.

ನಗರದ ಹೋಟೆಲ್‌ಗಳು ಹಾಗೂ ಉಪಾಹಾರ ಗೃಹಗಳಲ್ಲಿ ಈಗಾಗಲೇ ಇರುವ ಶೌಚಾಗೃಹಗಳನ್ನು ಗ್ರಾಹಕರಿಗೆ ಮಾತ್ರ ಸೀಮಿತಗೊ ಳಿಸದೆ, ಸಾರ್ವಜನಿಕರೂ ಉಚಿತವಾಗಿ ಬಳಸಲು ಅವಕಾಶ ಕಲ್ಪಿಸುವಂತೆ ಹೋಟೆಲ್ ಮಾಲೀಕರ ಸಂಘದ ಗಮನ ಸೆಳೆಯಲಾಗಿದೆ. ಇದಕ್ಕೆ ಸಂಘದಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ ಸಾಕಷ್ಟು ಹೋಟೆಲ್‌ಗಳು ತಮ್ಮ ಶೌಚಾಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿರುವುದು ಗಮನಾರ್ಹ.

ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಅಗತ್ಯ:

ನಗರದಲ್ಲಿ ಸಾರ್ವಜನಿಕ ಶೌಚಾಗೃಹಗಳ ಕೊರತೆ ಇರುವುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಕೆಲವರು ರಸ್ತೆ ಬದಿ, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದು ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಧಕ್ಕೆಯುಂಟುಮಾಡುವುದಲ್ಲದೆ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಆತಂಕಕಾರಿ ಸಂಗತಿಯಾಗಿದೆ.

ವಿಶೇಷವಾಗಿ ವಾಣಿಜ್ಯ ಪ್ರದೇಶಗಳು, ಬಸ್ ನಿಲ್ದಾಣಗಳ ಸುತ್ತಮುತ್ತ ಹಾಗೂ ಜನಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ಇಂತಹ ಸಮಸ್ಯೆ ಕಂಡುಬರುತ್ತಿದೆ. ಒಂದೆಡೆ ಶೌಚಾಗೃಹ ಕೊರತೆ, ಮತ್ತೊಂದೆಡೆ ಲಭ್ಯವಿರುವ ಸಾರ್ವಜನಿಕ ಶೌಚಾಗೃಹಗಳನ್ನು ಬಳಸುವ ಬದಲು ರಸ್ತೆ ಬದಿಯನ್ನು ಆಶ್ರಯಿಸುವ ಪ್ರವೃತ್ತಿ ನಗರ ಸ್ವಚ್ಛತಾ ಕಾರ್ಯಕ್ಕೆ ಸವಾಲಾಗಿದೆ.

ಬಯಲು ಮೂತ್ರ ವಿಸರ್ಜನೆ ತಡೆಗಟ್ಟಲು ನಗರ ಪಾಲಿಕೆ ಈ ಹಿಂದೆ ಬಿಎನ್ ರಸ್ತೆಯ ರಸ್ತೆಬದಿಯಲ್ಲಿ ಸ್ಟೀಲ್ ಮಿರರ್‌ಗಳನ್ನು ಅಳವಡಿಸುವ ವಿನೂತನ ಪ್ರಯೋಗ ಮಾಡಿತ್ತು. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರ ವರ್ತನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೈಗೊಂಡಿದ್ದ ಈ ಕ್ರಮದಿಂದ ನಿರ್ದಿಷ್ಟ ಸ್ಥಳದಲ್ಲಿ ಇಂತಹ ಚಟುವಟಿಕೆ ನಿಯಂತ್ರಣಕ್ಕೆ ಬಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಕೇವಲ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದಷ್ಟೇ ಅಲ್ಲದೆ, ಇಂತಹ ವಿಭಿನ್ನ ಹಾಗೂ ಪರಿಣಾಮಕಾರಿ ಉಪಕ್ರಮಗಳೂ ಅಗತ್ಯ ಎಂಬುದನ್ನು ಈ ಪ್ರಯೋಗ ತೋರಿಸಿಕೊಟ್ಟಿದೆ.

ಇದೇ ಮಾದರಿಯಲ್ಲಿ ನಗರದ ಸಮಸ್ಯಾತ್ಮಕ ಸ್ಥಳಗಳನ್ನು ಗುರುತಿಸಿ ಸೂಕ್ತ ತಡೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಬಯಲು ಮೂತ್ರ ವಿಸರ್ಜನೆ ಮಾಡುವವರಿಗೆ ನಿಯಮಾನುಸಾರ ದಂಡ ವಿಧಿಸುವುದರೊಂದಿಗೆ, ನಿರಂತರ ಜಾಗೃತಿ ಮತ್ತು ಮೇಲ್ವಿಚಾರಣೆಯನ್ನೂ ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಪ್ರವೃತ್ತಿಗೆ ಶಾಶ್ವತ ಕಡಿವಾಣ ಹಾಕಲು ಸಾಧ್ಯ.

ಹೊಸ ಶೌಚಗೃಹಗಳ ನಿರ್ಮಾಣಕ್ಕೆ ಆದ್ಯತೆ ಬೇಕು:

ಹೋಟೆಲ್‌ಗಳ ಶೌಚಾಗೃಹಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ನಿರ್ಧಾರ ಸ್ವಾಗತಾರ್ಹವಾದರೂ, ಇದೊಂದೇ ನಗರದ ಶೌಚಾಗೃಹ ಸಮಸ್ಯೆಗೆ ಸಂಪೂರ್ಣ ಪರಿಹಾರವಾಗಲಾರದು. ಹೀಗಾಗಿ ನಗರದ ಅಗತ್ಯಕ್ಕೆ ಅನುಗುಣವಾಗಿ ಹೊಸ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.

ಪ್ರಮುಖ ವಾಣಿಜ್ಯ ವಲಯಗಳು, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಉದ್ಯಾನಗಳು, ಪ್ರವಾಸಿ ತಾಣಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶೌಚಾಗೃಹ ಅಗತ್ಯವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಗುರುತಿಸಬೇಕು. ಮಹಿಳೆಯರು, ಪುರುಷರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ಹಾಗೂ ಅನುಕೂಲಕರ ವ್ಯವಸ್ಥೆ ಕಲ್ಪಿಸುವುದರ ಜತೆಗೆ, ಶೌಚಾಗೃಹಗಳ ನಿರ್ವಹಣೆಗೂ ಶಾಶ್ವತ ವ್ಯವಸ್ಥೆ ರೂಪಿಸಬೇಕು.

ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ:

ಹೋಟೆಲ್‌ಗಳ ಶೌಚಾಗೃಹಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಂದರ್ಭದಲ್ಲಿ ಅವುಗಳ ಸ್ವಚ್ಛತೆ, ನೀರಿನ ಲಭ್ಯತೆ ಮತ್ತು ಅಗತ್ಯ ನೈರ್ಮಲ್ಯ ವ್ಯವಸ್ಥೆ ನಿರಂತರವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. ಶೌಚಾಗೃಹ ಬಳಸಲು ಬರುವ ಸಾರ್ವಜನಿಕರಿಗೆ ಹೋಟೆಲ್ ಸಿಬ್ಬಂದಿ ಸಹಕಾರ ನೀಡಬೇಕು. ಅದೇ ರೀತಿ ಸಾರ್ವಜನಿಕರೂ ಸೌಲಭ್ಯವನ್ನು ಜವಾಬ್ದಾರಿಯಿಂದ ಬಳಸಬೇಕು.

ನಗರದಲ್ಲಿ ಬಯಲು ಮೂತ್ರ ವಿಸರ್ಜನೆ ತಡೆಗಟ್ಟುವುದು, ಸಾರ್ವಜನಿಕ ಆರೋಗ್ಯ ಸುಧಾರಿಸುವುದು ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸುವುದು ಕೇವಲ ನಗರ ಪಾಲಿಕೆಯ ಜವಾಬ್ದಾರಿಯಲ್ಲ. ಹೋಟೆಲ್ ಮಾಲೀಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಹೊಸ ಶೌಚಗೃಹಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಸೌಲಭ್ಯಗಳ ಸಮರ್ಪಕ ನಿರ್ವಹಣೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಕ್ರಮಗಳನ್ನು ಸಮನ್ವಯಗೊಳಿಸಿದಾಗ ಮಾತ್ರ ಮೈಸೂರನ್ನು ನೈಜ ಅರ್ಥದಲ್ಲಿ ಸ್ವಚ್ಛ ಹಾಗೂ ಸಾರ್ವಜನಿಕ ಸ್ನೇಹಿ ನಗರವನ್ನಾಗಿ ರೂಪಿಸಲು ಸಾಧ್ಯ.

ನಗರದಲ್ಲಿ ಈಗಾಗಲೇ ಸಾಕಷ್ಟು ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಮತ್ತಷ್ಟು ಹೊಸ ಶೌಚಗೃಹ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಜನರು ಶೌಚಗೃಹಗಳನ್ನು ಹುಡುಕಿಕೊಂಡು ಹೋಗುವ ಬದಲು ಸಮೀಪದ ಹೋಟೆಲ್‌ಗಳಲ್ಲಿರುವ ಶೌಚಗೃಹಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಹೋಟೆಲ್ ಮಾಲೀಕರಲ್ಲಿ ಮನವಿ ಮಾಡಲಾಗಿದೆ.

ಎಂ.ಕೆ. ಸವಿತಾ, ಆಯುಕ್ತರು, ನಗರ ಪಾಲಿಕೆ

ಹೋಟೆಲ್‌ಗಳ ಶೌಚಗೃಹಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇಡಲು ನಗರ ಪಾಲಿಕೆ ಆಯುಕ್ತರು ಮನವಿ ಮಾಡಿಕೊಂಡಿದ್ದು, ಅವರಿಗೆ ಮನವಿಗೆ ಸ್ಪಂದಿಸಲಾಗುವುದು. ನಗರದ ಹಲವಾರು ಹೋಟೆಲ್‌ಗಳು ಕೆಲವು ವರ್ಷಗಳಿಂದ ಹೋಟೆಲ್‌ಗಳ ಶೌಚಗೃಹಗಳನ್ನು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ ಸಾರ್ವಜನಿಕರ ಬಳಕೆಗೂ ಅವಕಾಶ ಮಾಡಿಕೊಟ್ಟಿದೆ.

ನಾರಾಯಣ ಗೌಡ, ಅಧ್ಯಕ್ಷರು, ಜಿಲ್ಲಾ ಹೋಟೆಲ್ ಮಾಲೀಕರ ಸಂಘ