ಜಿಲ್ಲೆ

ಹೋಟೆಲ್​ಗೆ​​ ನುಗ್ಗಿ ಕಾರ್ಮಿಕರ ಮೇಲೆ ಹಲ್ಲೆ, ಪೀಠೋಪಕರಣ ಧ್ವಂಸ: ಆರು ಜನರ ಬಂಧನ

Webdesk - Ravikanth

ಬೆಂಗಳೂರು: ಹೋಟೆಲ್‌ಗೆ ನುಗ್ಗಿ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಪಿಠೋಪಕರಣಗಳನ್ನು ಧ್ವಂಸ ಮಾಡಿದ ಆರು ಮಂದಿಯನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಸನ್ನ ಕುಮಾರ್, ಪ್ರಭು, ಮುರುಗನ್, ಗೋಪಿ, ಮಲ್ಲಿಕಾರ್ಜುನ್ ಮತ್ತು ಹರೀಶ ಬಂಧಿತರು. ಆರೋಪಿಗಳು ಫೆ.13ರ ತಡರಾತ್ರಿ 1.30ರ ಸುಮಾರಿಗೆ ನಗರತ್‌ಪೇಟೆಯ ಸಿಟಿ ಸ್ಟ್ರೀಟ್‌ನಲ್ಲಿರುವ ಎಸ್‌ಎಲ್‌ವಿ ಭವನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದ್ಮನಾಭ ಎಂಬುವರು 30 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದು, ಹೋಟೆಲ್ ಇರುವ ಆಸ್ತಿ ನಗರತರ ಹನುಮಂತರಾಯ ಶೆಟ್ಟರ ಧರ್ಮಛತ್ರದ ಟ್ರಸ್ಟ್‌ಗೆ ಸೇರಿದೆ. ಆದರೆ, ಮೂವರು ಪ್ರಮುಖ ಆರೋಪಿಗಳು ಈ ಆಸ್ತಿ ತಮಗೆ ಸೇರಿದ್ದು ಎಂದು ತಕರಾರು ಮಾಡಿ ತಮ್ಮ ಹೆಸರಿಗೆ ಕ್ರಯ ಪತ್ರ ಮಾಡಿಸಿಕೊಂಡಿದ್ದು, ಈ ಸಂಬಂಧ ಈ ಹಿಂದೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಹಂತದಲ್ಲಿದೆ.

ಈ ನಡುವೆ ಫೆ. 13ರ ತಡರಾತ್ರಿ ಮೂವರು ಆರೋಪಿಗಳು ತಮ್ಮ 10-15 ಮಂದಿ ಸಹಚರರ ಜತೆ ಹೋಟೆಲ್‌ಗೆ ನುಗ್ಗಿ ಗೋಡೆ ಕೆಡವಿ, ಸಾಮಗ್ರಿಗಳನ್ನು ಧ್ವಂಸಗೊಳಿಸಿ, ಅದನ್ನು ಪ್ರಶ್ನಿಸಿದ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಿಸಿ ಕ್ಯಾಮರಾದ ಡಿವಿಆರ್ ಮತ್ತು ಸಿಬ್ಬಂದಿ ಮೊಬೈಲ್​​ಫೋನ್​ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.