ಜಿಲ್ಲೆ

ಹೋಟೆಲ್ ವ್ಯಾಪಾರವೂ ಲಾಕ್​ಡೌನ್

Dharwad

ಬಸವರಾಜ ಇದ್ಲಿ ಹುಬ್ಬಳ್ಳಿ
ಕಳೆದ ವರ್ಷದ ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಹೋಟೆಲ್ ಉದ್ಯಮವು ಈಚೆಗೆಷ್ಟೇ ಚೇತರಿಸಿಕೊಳ್ಳುತ್ತಿತ್ತು. ಈಗ ಮತ್ತೆ ಕರೊನಾ ಸೋಂಕಿನ ಹೊಡೆತಕ್ಕೆ ತತ್ತರಿಸಿ ಹೋಗಿದೆ.
ಕಳೆದ ಎರಡು ವಾರದಿಂದ ಹೇರಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಬಾಗಿಲು ಅರ್ಧ ತೆರೆದಿದ್ದು, ಈ ಮೊದಲಿನಂತೆ ವ್ಯಾಪಾರ ಇಲ್ಲದೆ ಭಾರಿ ಹೊಡೆತ ಬಿದ್ದಿದೆ.
ನಿತ್ಯ ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ಲಾಕ್​ಡೌನ್ ಸಡಿಲಿಕೆ ಇದೆ. ಹೋಟೆಲ್​ಗಳು ಪಾರ್ಸಲ್ ಮಾತ್ರ ಕೊಡಬಹುದು. ಲಾಕ್​ಡೌನ್ ಸಡಿಲಿಕೆ ಅವಧಿ ಮುಗಿದ ನಂತರವೂ ಪಾರ್ಸೆಲ್ ಸರ್ವಿಸ್​ಗೆ ಅವಕಾಶ ಇದ್ದರೂ ಮಧ್ಯಾಹ್ನದ ನಂತರ ಜನರಿಗೆ ಓಡಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಯಾರೂ ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುವುದಿಲ್ಲ ಎಂಬುದು ಹೋಟೆಲ್ ಉದ್ಯಮಿಗಳ ಅಳಲು.
ಲಾಕ್​ಡೌನ್ ಹೇರಿಕೆಯ ಮೊದಲು ಆಗುತ್ತಿದ್ದ ಗಳಿಕೆಯ ಶೇ. 20ರಷ್ಟು ವ್ಯಾಪಾರವು ಈಗ ಆಗುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಬಾಡಿಗೆ ಆಧಾರದಲ್ಲಿ ಕಟ್ಟಡ ಪಡೆದು ಹೋಟೆಲ್ ನಡೆಸುತ್ತಿರುವ ನೂರಾರು ಮಾಲೀಕರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಕೆಲಸಕ್ಕೆ ಇಟ್ಟುಕೊಂಡಿರುವ ಹುಡುಗರಿಗೆ ಸಂಬಳ, ಊಟ, ವಸತಿ ನೀಡಿ ಉಳಿಸಿಕೊಳ್ಳಬೇಕಿದೆ. ಹಾಗಾಗಿ ಇದೀಗ ನೀಡಿರುವ ಪಾರ್ಸೆಲ್ ಸೇವೆಯಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಅನೇಕ ಮಾಲೀಕರು ಕೆಲಸಗಾರರನ್ನು ಈಗಾಗಲೇ ಅವರವರ ಊರಿಗೆ ಕಳಿಸಿಬಿಟ್ಟಿದ್ದಾರೆ. ಪಾರ್ಸೆಲ್ ಸರ್ವಿಸ್ ಇರುವ ಹೋಟೆಲ್​ನವರು ಮಾತ್ರ ಕೆಲವರನ್ನು ಉಳಿಸಿಕೊಂಡಿದ್ದಾರೆ. ಹೀಗೆ ಉಳಿಸಿಕೊಂಡ ಕೆಲಸಗಾರರಿಗೂ ಸಂಬಳ ಕೊಡಲಾರದ ಸ್ಥಿತಿ ಬಂದಿದೆ. ಪ್ರಸ್ತುತ ಶೇ. 80ರಷ್ಟು ಆದಾಯಕ್ಕೆ ಹೊಡೆತ ಬೀಳುತ್ತಿದೆ. ಆದರೆ, ಖರ್ಚು, ವೆಚ್ಚಗಳನ್ನು ಮಾತ್ರ ಎಂದಿನಂತೆ ಮಾಡಲೇಬೇಕಾದ ಅನಿವಾರ್ಯತೆ ಕಾಡುತ್ತಿದೆ.
ಮನೆಮನೆಗೆ ಪಾರ್ಸೆಲ್ ತಲುಪಿಸುವ ಕೆಲ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಹೋಟೆಲ್​ಗಳಲ್ಲಿ ಒಂದಿಷ್ಟು ಪಾರ್ಸೆಲ್ ಸೇವೆ ಉತ್ತಮವಾಗಿ ನಡೆಯುತ್ತಿದೆ. ಉಳಿದಂತೆ ಎಲ್ಲ ಹೋಟೆಲ್​ಗಳು ಉದ್ಯೋಗ ಇಲ್ಲದೇ ಯಾತನೆ ಅನುಭವಿಸುತ್ತಿವೆ.
ಪ್ರತಿ ದಿನ 10 ಸಾವಿರ ರೂ. ದುಡಿಯುತ್ತಿದ್ದ ಹೋಟೆಲ್ ಮಾಲೀಕರು ಈಗ ಪಾರ್ಸೆಲ್ ಸರ್ವಿಸ್​ನಲ್ಲಿ ಕೇವಲ 1500 ರೂ. ಗಳಿಸುತ್ತಿದ್ದಾರೆ. ಅಷ್ಟರಲ್ಲೇ ಕೆಲಸಗಾರರ ಸಂಬಳ, ಬಾಡಿಗೆ, ಇತರೆ ಖರ್ಚುಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ಕೋವಿಡ್​ನಿಂದಾಗಿ ಹೋಟೆಲ್ ಉದ್ಯಮ ನೆಲ ಕಚ್ಚಿದೆ ಎಂದು ಹೋಟೆಲ್ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ವಿವರಿಸುತ್ತಾರೆ. ಕನಿಷ್ಠ ಪಕ್ಷ ಜನರು ಹೋಟೆಲ್​ಗೆ ಬಂದು ಪಾರ್ಸೆಲ್ ತೆಗೆದುಕೊಂಡು ಹೋಗಲು ಸುಲಭ ಅವಕಾಶ ಇರಬೇಕು. ಇಲ್ಲದಿದ್ದರೆ ಪಾರ್ಸೆಲ್ ಸೇವೆ, ಕರ್ಫ್ಯೂ ಸಡಿಲಿಕೆ ಎಂಬುದು ಕೇವಲ ನೆಪ ಮಾತ್ರಕ್ಕೆ ಎಂಬಂತಾಗುತ್ತದೆ ಎಂದು ಅನೇಕ ಹೋಟೆಲ್ ಮಾಲೀಕರು ಅಭಿಪ್ರಾಯಪಡುತ್ತಾರೆ.

ಕಳೆದ ವರ್ಷದ ನಷ್ಟದಿಂದ ಹೊರಬಂದು ಉಸಿರಾಡಬೇಕೆನ್ನುವ ಹೊತ್ತಿಗೆ ಮತ್ತೆ ಲಾಕ್​ಡೌನ್ ಉಸಿರುಕಟ್ಟಿಸುತ್ತಿದೆ. ಪಾರ್ಸೆಲ್ ಸೇವೆಯಿಂದ ಕೇವಲ 20ರಷ್ಟು ಬಿಜನೆಸ್ ನಡೆಯುತ್ತಿದೆ. ಹೋಟೆಲ್ ನಿರ್ವಹಣೆ ಮಾಡಲು ಸಾಧ್ಯವಾಗದೇ ಎಷ್ಟೋ ಜನರು ಈ ಉದ್ಯೋಗ ಬಿಟ್ಟಿದ್ದಾರೆ. ಮುಂದೆ ಜೀವನ ಹೇಗೆ ಎಂಬುದೇ ಹೋಟೆಲ್ ಉದ್ಯಮಿಗಳಿಗೆ ತಿಳಿಯುತ್ತಿಲ್ಲ. ಸರ್ಕಾರ ಒಂದಿಷ್ಟು ನಮ್ಮ ಸಂಕಷ್ಟದ ಬಗ್ಗೆಯೂ ಚಿಂತಿಸಬೇಕಿದೆ.| ರವಿ ಗಾಯತೊಂಡೆಕಾರ್ಯದರ್ಶಿ, ಹುಬ್ಬಳ್ಳಿ ಹೋಟೆಲ್ ಸಂಘ