ಜಿಲ್ಲೆ

ಅನಧಿಕೃತ ಹೋಟೆಲ್‌ಗೆ ಬೀಗ - ಅಪಾಯಕಾರಿ ಕಟ್ಟಡದಲ್ಲಿ ಕಾರ್ಯಾಚರಣೆ

Mangaluru - Nishantha Narayana

ಪುತ್ತೂರು: ಅಪಾಯಕಾರಿ ಕಟ್ಟಡದಲ್ಲಿ ಅನಧಿಕೃತವಾಗಿ ಹೋಟೆಲ್ ಕಾರ್ಯಾಚರಿಸುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಪೊಲೀಸ್ ಭದ್ರತೆಯಲ್ಲಿ ಹೋಟೆಲ್‌ಗೆ ಶುಕ್ರವಾರ ಬೀಗ ಜಡಿಯಲಾಗಿದೆ.

ಮಹಿಳಾ ಪೊಲೀಸ್ ಠಾಣೆಯ ಮುಂಭಾಗದ ಹಳೆಯ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಹೋಟೆಲ್ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ರಿಸೀವರ್ ಕಾನೂನು ಪ್ರಕ್ರಿಯೆ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ನಗರ ಸಭೆ ಕಾರ್ಯಾಚರಣೆ ನಡೆಸಿದೆ.

ಹೋಟೆಲ್ ಬಂದ್ ಮಾಡಿ, ಕೀಲಿ ಕೈಯನ್ನು ರಿಸೀವರ್ ಕೈಗೆ ನೀಡುವಂತೆ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಅಽಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಹೋಟೆಲ್ ಬಂದ್ ಮಾಡಿ ಬೀಗ ಜಡಿದಿದ್ದಾರೆ.

ಕಾರ್ಯಾಚರಣೆ ಸಂದರ್ಭ ಹೋಟೆಲ್ ಬಿಟ್ಟು ತೆರಳುವುದಿಲ್ಲ ಎಂದು ಹೋಟೆಲ್ ಮಾಲಕಿ ಪಟ್ಟು ಹಿಡಿದ ಘಟನೆಯೂ ನಡೆದಿದೆ. ಹೊಟೇಲ್‌ಗೆ ಬೀಗ ಮಾತ್ರ ಹಾಕಬೇಕು ಹೊರತು ಸೀಲ್ ಹಾಕಬಾರದು ಎಂದು ಮಾಲಕಿ ಪಟ್ಟುಹಿಡಿದರು. ಇದಕ್ಕೆ ಒಪ್ಪಿಕೊಂಡ ಬಳಿಕ ಮಾಲಕಿ ಹೋಟೆಲ್‌ನಿಂದ ಹೊರಬಂದಿದ್ದು, ಬಳಿಕ ಬೀಗ ಹಾಕಿ ಸೀಲ್ ಹಾಕಲಾಗಿದೆ.

ಕಟ್ಟಡದಲ್ಲಿ ವ್ಯವಹಾರ ಮಾಡುವುದಕ್ಕೆ ಆಕ್ಷೇಪದ ಹಿನ್ನೆಲೆಯಲ್ಲಿ ನಗರ ಸಭೆ ಪರವಾನಗಿ ನೀಡಿಲ್ಲ ಎಂದು ಹೇಳಲಾಗುತ್ತಿದ್ದರೂ ಅದೇ ಕಟ್ಟಡದಲ್ಲಿ ಇನ್ನಷ್ಟು ಅಂಗಡಿ ಮಳಿಗೆಗಳು ವ್ಯವಹರಿಸುತ್ತಿವೆ. ಆದರೆ ಅವುಗಳ ಮೇಲೆ ಯಾವುದೇ ಕ್ರಮ ವಹಿಸದಿರುವುದು ಸಾರ್ವಜನಿಕರಲ್ಲಿ ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.