ಜಿಲ್ಲೆ

ಬಿಸಿಲಿನ ಅಬ್ಬರ... ನೀರಿಗಿಲ್ಲ ಬರ..

Dharwad

ಧಾರವಾಡ: ಬೇಸಿಗೆ ಆರಂಭವಾಗಿದ್ದು, ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ನೀರಿನ ಹಾಹಾಕಾರ ತಲೆದೋರುವ ಮೊದಲು ಜಿಲ್ಲಾಡಳಿತ ಪೂರ್ವಸಿದ್ಧತೆ ಕೈಗೊಂಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಟಾಸ್ಕ್​ಫೋರ್ಸ್ ಅಡಿ ತುರ್ತು ಕಾಮಗಾರಿಗಳಿಗಾಗಿ ಅನುದಾನವನ್ನು ಮೀಸಲಿರಿಸಲಾಗಿದೆ.

ಜಿಲ್ಲಾದ್ಯಂತ 388 ಜನವಸತಿ ಗ್ರಾಮಗಳಿವೆ. ಕುಡಿಯಲು ಮತ್ತು ದಿನಬಳಕೆಗಾಗಿ ಬಹುತೇಕ ಕಡೆಗಳಲ್ಲಿ ಕೊಳವೆ ಬಾವಿ ಮತ್ತು ಕೆರೆಗಳನ್ನು ಅವಲಂಬಿಸಲಾಗಿದೆ. 2019 ಮತ್ತು 2020ರಲ್ಲಿ ಉತ್ತಮ ಮಳೆಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಅಲ್ಲದೆ, ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಹೀಗಾಗಿ, ಬಹುತೇಕ ಗ್ರಾಮಗಳಲ್ಲಿ ಮಾರ್ಚ್ ಮುಗಿಯುತ್ತ ಬಂದರೂ ನೀರಿಗಾಗಿ ಹಾಹಾಕಾರ ಕೇಳಿಬಂದಿಲ್ಲ.

ಪ್ರತಿ ತಾಲೂಕಿಗೆ -ಠಿ; 15 ಲಕ್ಷ: ಹುಬ್ಬಳ್ಳಿ- ಧಾರವಾಡ ನಗರ, ಕುಂದಗೋಳ, ನವಲಗುಂದ, ಅಳ್ನಾವರ, ಕಲಘಟಗಿ ತಾಲೂಕು ಕೇಂದ್ರಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ಎದುರಾಗುವ ಸಾಧ್ಯತೆ ಇದೆ. ಅದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಪ್ರತಿ ತಾಲೂಕಿನ ಟಾಸ್ಕ್

ಫೋರ್ಸ್​ಗೆ 15 ಲಕ್ಷ ರೂ. ಅನುದಾನ ಮೀಸಲಿ ರಿಸಲಾಗಿದೆ. ಮುಂಬರುವ ಏಪ್ರಿಲ್, ಮೇ ತಿಂಗಳ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ತುರ್ತಾಗಿ ಕೊಳವೆ ಬಾವಿಗಳನ್ನು ಕೊರೆಸಲು ಸರ್ಕಾರದಿಂದ ನಿರ್ದೇಶನವಿದೆ. ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಮಾಡಿ ಕೊಳವೆ ಬಾವಿ ಕೊರೆಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆೆ.

ಬಾಡಿಗೆ ಬೋರ್​ವೆಲ್ ಇಲ್ಲ: 4-5 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಬಾವಿಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲದೆ, ದುರಸ್ತಿ ಅಥವಾ ನೀರಿನ ಕೊರತೆಯಾಗಿ ಹಾಹಾಕಾರ ಉಂಟಾಗಿತ್ತು. ಆ ಸಂದರ್ಭದಲ್ಲಿ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಮೂಲಕ ಪಡೆದು ನೀರು ಸರಬರಾಜು ಮಾಡಲಾಗಿತ್ತು. ಬಾಡಿಗೆ ಬೋರ್​ವೆಲ್​ಗಳ ಬಳಕೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ, ಈ ಬೇಸಿಗೆಯಲ್ಲಿ ಬೋರ್​ವೆಲ್​ಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವ ಪ್ರಸಂಗ ಬರುವುದು ತೀರ ಕಡಿಮೆ ಎಂಬುದು ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ. ಮುನವಳ್ಳಿ ಅಭಿಪ್ರಾಯ.

ಕೆರೆಗಳು ಭರ್ತಿ: ನವಲಗುಂದ ತಾಲೂಕಿನ ಹಲವು ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಸಾಮಾನ್ಯ ಎನ್ನುವಂತಿತ್ತು. ಈ ಬಾರಿ ಅಂಥ ಸ್ಥಿತಿ ಎದುರಾಗದು. ಕಾರಣ ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರಾವರಿಗಾಗಿ 2- 3 ತಿಂಗಳು ನೀರು ಬಿಡಲಾಗಿತ್ತು. ಕಾಲುವೆಗಳ ಮೂಲಕ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಕೆರೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಜಮೆಯಾಗಿದೆ. ಅಲ್ಲಿಂದ ಮನೆಮನೆಗೆ ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿದ್ದು, ಈ ಬೇಸಿಗೆ ಮುಗಿಯುವವರೆಗೆ ಸಮಸ್ಯೆ ಎದುರಾಗದು.

ಜಲಜೀವನ್ ಮಿಷನ್ ವರದಾನ

ದೇಶಾದ್ಯಂತ ಗ್ರಾಮೀಣ ಪ್ರದೇಶಗಳ ಮನೆಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆಯು ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳುತ್ತಿದೆ. ಪ್ರತಿ ವ್ಯಕ್ತಿಗೆ ಪ್ರತಿ ದಿನ 55 ಲೀ. ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಜಲಮೂಲಗಳ ನವೀಕರಣ, ಓವರ್ ಹೆಡ್ ಟ್ಯಾಂಕ್​ಗಳ ನವೀಕರಣ- ನಿರ್ಮಾಣ ಕಾರ್ಯ ನಡೆಯುತ್ತಿದೆ. ಜೆಜೆಎಂನ 100ಕ್ಕೂ ಹೆಚ್ಚು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಕೆಲವೆಡೆ ಕಾಮಗಾರಿ ಕೂಡ ಆರಂಭವಾಗಿದೆ. ಬಳಕೆಯಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿ ಇದೇ ಮೊದಲು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಗ್ರಾಮಗಳಲ್ಲಿ ನೀರಿನ ಬವಣೆ ಎದುರಾದರೆ ಆಯಾ ಪಿಡಿಒಗಳು ತುರ್ತು ಕ್ರಮ ಕೈಗೊಳ್ಳುತ್ತಿದ್ದಾರೆ. ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿಲ್ಲ. ಸಮಸ್ಯೆ ಕಂಡುಬಂದರೆ ಜಲಜೀವನ್ ಮಿಷನ್ ಅಡಿ ಬೋರ್​ವೆಲ್ ಕೊರೆದು ಸರಿಪಡಿಸಲಾಗುವುದು. ಟ್ಯಾಂಕರ್ ನೀರು ಸರಬರಾಜು ಅಥವಾ ಬೋರ್​ವೆಲ್ ಬಾಡಿಗೆ ಪಡೆಯುವ ಪ್ರಸಂಗ ಬಾರದು. ತುರ್ತು ಕ್ರಮ ಕೈಗೊಳ್ಳಲು ಟಾಸ್ಕ್​ಫೋರ್ಸ್ ಅಡಿ ಅಗತ್ಯ ಅನುದಾನವಿದೆ.| ಆರ್.ವಿ. ಮುನವಳ್ಳಿಇಇ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ