ಹೊಸೂರು : ಮೃತರ ಕುಟುಂಬಕ್ಕೆ 28 ವರ್ಷಗಳಿಗೂ ಹೆಚ್ಚು ಕಾಲ ಪರಿಹಾರ ನೀಡದ ಕಾರಣ ಹೊಸೂರು ಮಹಾನಗರ ಪಾಲಿಕೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೊಸೂರು ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಆಯುಕ್ತರು ಒಂದು ವಾರದ ಕಾಲಾವಕಾಶ ಕೋರಿದ ನಂತರ ಮುಟ್ಟುಗೋಲು ಕ್ರಮ ಕೈಬಿಡಲಾಗಿದೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿಯ ಬಾಗಲೂರು ಪ್ರದೇಶದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿವೇಕಾನಂದನ್ 1996ರಲ್ಲಿ ಹೊಸೂರು ಪುರಸಭೆಯ ಒಳಚರಂಡಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದರು. ಪುರಸಭೆಯು ಕಾಲುವೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಪತಿ ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ 2001ರಲ್ಲಿ ಹೊಸೂರು ಉಪ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
2015ರಲ್ಲಿ ನ್ಯಾಯಾಲಯವು ಸಂತ್ರಸ್ತೆಗೆ 2001 ರಿಂದ ತೀರ್ಪಿನ ದಿನಾಂಕದವರೆಗೆ ಶೇ.9 ಬಡ್ಡಿಯೊಂದಿಗೆ ಎರಡು ತಿಂಗಳೊಳಗೆ ಪರಿಹಾರವಾಗಿ 6,65,000 ರೂಪಾಯಿ ಪಾವತಿಸಲು ಆದೇಶಿಸಿತ್ತು. ಆದಾಗ್ಯೂ ಅರ್ಜಿದಾರರಿಗೆ ಪರಿಹಾರ ಸಿಕ್ಕಿರಲಿಲ್ಲ. ಆದ್ದರಿಂದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ಹೊಸೂರು ಮಹಾನಗರ ಪಾಲಿಕೆಯ ಚರಾಸ್ತಿಗಳನ್ನು ಮೊತ್ತಕ್ಕೆ ಸಮನಾಗಿ ವಶಪಡಿಸಿಕೊಳ್ಳಲು ಆದೇಶಿಸಿತು. ಹೀಗಾಗಿ ಆಯುಕ್ತೆ ಮರಿಚೆಲ್ವಿ ಅವರು ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸಲು ಒಂದು ವಾರದ ಸಮಯ ನೀಡಬೇಕೆಂದು ವಿನಂತಿಸಿದರು. ಆಯುಕ್ತರ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಸಂತ್ರಸ್ತೆಗೆ ಪರಿಹಾರವಾಗಿ 20.83 ಲ ರೂಪಾಯಿ ಪಾವತಿಸಬೇಕಾಗಿದೆ.