ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ಸೋಮವಾರ ಕೊಪ್ಪಳದಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಗ್ಯಾನೇಶ ಕಡಗದ, ಮಹದ್ ರಫೀಕ್, ದ್ಯಾಮಣ್ಣ ಪರಿಯವರ, ಮುಕ್ತುಂಸಾಬ್, ಫಾಲಾಕ್ಷಗೌಡ ಇದ್ದರು. 
ಜಿಲ್ಲೆ

ಟೆಂಡರ್ ವಿನಾಯಿತಿ ನೀಡಲು ಹಾಸ್ಟೆಲ್ ನೌಕರರ ಪ್ರತಿಭಟನೆ

HOSTEL WORKERS PROTEST TENDER KOPPAL

Kopala - Raveendra V K

ಕೊಪ್ಪಳ: ಜಿಲ್ಲಾ ಸಾರ್ವಜನಿಕ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಹಕಾರ ಸಂಘಕ್ಕೆ ಟೆಂಡರ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ರಾಜ್ಯ ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ವಸತಿ ನಿಲಯ/ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು 11 ವರ್ಷದಿಂದ ಒಂದೇ ಏಜೆನ್ಸಿಯಡಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ನೌಕರರು ಕೊಪ್ಪಳ ಜಿಲ್ಲಾ ಸಾರ್ವಜನಿಕ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಹಕಾರ ಸಂಘ ನಿ. ಸದಸ್ಯರಾಗಿದ್ದಾರೆ.

ಎಲ್ಲ ಸೌಲಭ್ಯಗಳನ್ನು ಪಡೆದು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರತಿ ವರ್ಷ ಟೆಂಡರ್ ಆಹ್ವಾನಿಸಿ ಗುತ್ತಿಗೆ ನೀಡುತ್ತಿದ್ದು, ಆತಂಕ ನಿವಾರಣೆಯಾಗಿಲ್ಲ. ಸಾಮಗ್ರಿ ಸರಬರಾಜು ಅಥವಾ ದಾಸ್ತಾನು ಸರಬರಾಜು ಮಾಡುವವರಿಗೆ ಟೆಂಡರ್ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಟೆಂಡರ್ ಕರೆಯುವುದನ್ನು ಬಿಟ್ಟು ವಿನಾಯಿತಿ ನೀಡಬೇಕು. ಸಹಕಾರ ಸಂಘಕ್ಕೆ ಸೇವಾ ಕಾರ್ಯಾದೇಶ ನೀಡಬೇಕು. 2023ರ ಕನಿಷ್ಠ ಕಾಯ್ದೆ ವೇತನವನ್ನು ಕ್ರೈಸ್ ವಸತಿ ಶಾಲೆಗಳ ಸಿಬ್ಬಂದಿಗೆ ಅನ್ವಯಿಸಬೇಕು.

2017-18ನೇ ಸಾಲಿನಲ್ಲಿ ಮಂಜೂರಾದ ವಸತಿ ಶಾಲೆಗಳಿಗೆ ಹೊರ ಸಂಪನ್ಮೂಲ ಸಿಬ್ಬಂದಿ ಸಂಖ್ಯೆ 7 ರಿಂದ 11ಕ್ಕೆ ಹೆಚ್ಚಿಸಬೇಕು. ಸಿಬ್ಬಂಡಿ ವೇತನ ಕಡಿತ ಆದೇಶ ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಬಳಿಕ ಸಿಇಒ ರಾಹುಲ್ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಗ್ಯಾನೇಶ ಕಡಗದ, ಮಹದ್ ರಫೀಕ್, ದ್ಯಾಮಣ್ಣ ಪರಿಯವರ, ಮುಕ್ತುಂಸಾಬ್, ಫಾಲಾಕ್ಷಗೌಡ, ಜ್ಯೋತಿ ಚಿಕ್ಕಮಠ, ಹನುಮೇಶ ಮುಕ್ಕುಂಪಿ ಇತರರಿದ್ದರು.