ಸವಣೂರ: ಅನುದಾನ ಕೊರತೆಯಿಂದಾಗಿ ಪಟ್ಟಣದಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾಮಗಾರಿ ಅಪೂರ್ಣಗೊಂಡಿದೆ.
2021-2022ನೇ ಸಾಲಿನಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಣೆಯಡಿ 125 ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ವಸತಿ ನಿಲಯ ಮಂಜೂರಾಗಿದೆ. 2.84 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪಟ್ಟಣದ ಅಧ್ಯಾಪಕ ನಗರದಲ್ಲಿ 10 ಗುಂಟೆ ಜಾಗದಲ್ಲಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಜತೆಗೆ ಮೊದಲ ಹಂತದಲ್ಲಿ 1 ಕೋಟಿ 16 ಲಕ್ಷ 87 ಸಾವಿರ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಕೈಗೊಳ್ಳಲಾಗಿದೆ.
ಬಿಡುಗಡೆಗೊಂಡ ಅನುದಾನದಲ್ಲಿ ಮಾಡಬಹುದಾದ ಕಾಮಗಾರಿ ಮುಗಿದಿದೆ. ಬಾಕಿ ಅನುದಾನ ಬಿಡುಗಡೆಯಾಗಿಲ್ಲವಾದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದರೆ, ಹೆಚ್ಚುವರಿ ಕಾಮಗಾರಿಗಾಗಿ ಮರು ಕ್ರಿಯಾ ಯೋಜನೆ ಅನಿವಾರ್ಯವಾಗಿದೆ. ಜಿಪಂ ಇಲಾಖೆ ಅಧಿಕಾರಿಗಳು ಮರು ಕ್ರಿಯಾ ಯೋಜನೆ ಸಿದ್ಧಪಡಿಸಿ ಸುಮಾರು 2.50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.
ಬಾಡಿಗೆ ಕಟ್ಟಡ:
ಪಟ್ಟಣದ ಬಂಕಾಪುರ ರಸ್ತೆಯಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ವಸತಿ ನಿಲಯ ಕಾರ್ಯ ನಿರ್ವಹಿಸುತ್ತಿದೆ. 125 ವಿದ್ಯಾರ್ಥಿನಿಯರ ಸಾಮರ್ಥ್ಯ ಹೊಂದಿದ್ದರೂ ಸಹ ಕಟ್ಟಡ ಹಾಗೂ ನಿರ್ವಹಣೆ ಹಿನ್ನೆಲೆಯಲ್ಲಿ ಕೇವಲ 91 ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪ್ರತಿ ತಿಂಗಳು ಸುಮಾರು 34 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ. 2021ರಿಂದ ಇಲ್ಲಿಯವರೆಗೆ ಇಲಾಖೆಯಿಂದ 14.40ಲಕ್ಷ ರೂ. ಬಾಡಿಗೆ ನೀಡಲಾಗಿದೆ. ಸರ್ಕಾರ ಕೂಡಲೇ ಅನುದಾನ ಮಂಜೂರು ಮಾಡಿ ವಸತಿ ನಿಲಯದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದಲ್ಲಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಜತೆಗೆ ಪ್ರತಿ ತಿಂಗಳು ಪಾವತಿಸುವ ಬಾಡಿಗೆ ಸಹ ಉಳಿತಾಯವಾಗಲಿದೆ.
ಸವಣೂರಿನಲ್ಲಿ ಬಿಸಿಎಂ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾಮಗಾರಿ ಪೂರ್ಣಗೊಳಿಸಲು ಅವಶ್ಯವಿರುವ ಹೆಚ್ಚುವರಿ ಅನುದಾನ ಕುರಿತು ಮರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ನಂತರ ಕಾಮಗಾರಿ ಆರಂಭಿಸಲಾಗುವುದು. ರಾಘವೇಂದ್ರ ಜಿ., ಎಇಇ, ಪಂರಾ ಇಂಜಿನಿಯರಿಂಗ್ ಉಪ ವಿಭಾಗ ಸವಣೂರ. ವಸತಿ ನಿಲಯ ಕಾಮಗಾರಿ ಮುಕ್ತಾಯಗೊಳಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ. ಎಸ್.ಎಲ್. ಕಟ್ನೂರ, ಬಿಸಿಎಂ ವಿಸ್ತರ್ಣಾಧಿಕಾರಿ