ವಿಜಯವಾಣಿ ಸುದ್ದಿಜಾಲ ಕಾರವಾರ
ವಿಧಾನಸಭೆ ಚುನಾವಣೆಯಲ್ಲಿ ತಮಗೇ ಮತ ಬೀಳಬೇಕು ಎಂದು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿದರೆ, ಅತೀ ಹೆಚ್ಚು ಮತದಾನ ಮಾಡಿಸಲು ಚುನಾವಣಾ ಆಯೋಗವೂ ವಿವಿಧ ಮಾದರಿಯ ಪ್ರಚಾರ ಕಾರ್ಯ ಕೈಗೊಳ್ಳುತ್ತದೆ.
ಜಿಲ್ಲೆಯ ಮತದಾನ ಜಾಗೃತಿ ಸಲುವಾಗಿ ರಚಿಸಲಾದ ಸ್ವೀಪ್ ಸಮಿತಿಯ ಜವಾಬ್ದಾರಿ ಹೊತ್ತಿರುವ ಜಿಪಂ ಸಿಇಒ ಈಶ್ವರ ಕಾಂದೂ ಅವರು ವಿಶೇಷ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಒಟ್ಟು 6250ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಅವರ ಪಾಲಕರಿಗೆ ಪತ್ರ ಬರೆಸಿದ್ದಾರೆ. ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಿಂದ ಮತದಾನ ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಮತದಾನ ಜಾಗೃತಿ ಪತ್ರ ಅಭಿಯಾನದ ಜವಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅಜ್ಜಪ್ಪ ಸೊಗಲದ ಹಾಗೂ ಸಂಬಂಧಿಸಿದ ವಸತಿ ಶಾಲೆಯ ಪ್ರಾಚಾರ್ಯರಿಗೆ ವಹಿಸಲಾಗಿದೆ.
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಜರುಗುವ ಸಾರ್ವಜನಿಕ ಸಭೆ, ಸಮಾರಂಭ, ಜಾತ್ರೆಗಳಲ್ಲಿ ಮತದಾನ ಯಂತ್ರದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಯಕ್ಷಗಾನ, ಗ್ರಾಮೀಣ ಕಲೆ, ನೃತ್ಯ, ಬೈಕ್ ಜಾಥಾ, ಮಾನವ ಸರಪಳಿ, ಅಂಗವಿಕಲರ ಬೈಕ್ ಜಾಥಾದಂತಹ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈಗಾಗಲೇ ಐತಿಹಾಸಿಕ ಗೋಕರ್ಣ ಜಾತ್ರೆ, ಕದಂಬೋತ್ಸವ ಸೇರಿದಂತೆ ಮತದಾನ ಜಾಗೃತಿ ಕೈಗೊಳ್ಳಲಾಗಿದ್ದು, ಪತ್ರ ಬರೆಯುವಿಕೆಯ ಹೊಸ ವಿಧಾನ ಅನುಸರಿಸಲಾಗಿದೆ ಎಂದು ಕಾಂದೂ ತಿಳಿಸಿದ್ದಾರೆ.