ಜಿಲ್ಲೆ

ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾಗುವಂತಹ ವಾತಾವರಣವನ್ನು ವಿದ್ಯಾರ್ಥಿನಿಲಯಗಳಲ್ಲಿ ಸೃಷ್ಟಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳು ಸೌಲಭ್ಯ ಬಳಸಿಕೊಂಡು ಉತ್ತಮ ಶಿಕ್ಷಣವಂತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ ನೀಡಿದರು.

ನಗರದ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ವಿದ್ಯಾರ್ಥಿನಿಲಯಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ. ಇದರೊಂದಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಹೆಣ್ಣು ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಹೆಚ್ಚೆಚ್ಚು ಳಿದುಕೊಳ್ಳಬೇಕು. ಏಕೆಂದರೆ ಅವರು ಮಹಿಳೆಯರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳು ಶಾಲೆಯನ್ನೇ ನೋಡದ ದಿನಗಳಿದ್ದವು. ಆದರೆ ಪ್ರಸ್ತುತ ಹೆಣ್ಣು ಮಕ್ಕಳಿಲ್ಲದ ಶಾಲೆ, ಕಾಲೇಜು ಹಾಗೂ ಸ್ಥಾನಮಾನಗಳಿಲ್ಲ. ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ಬಿಇಒ ಸೌಭಾಗ್ಯ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ, ನಿಲಯಪಾಲಕರಾದ ಸುಷ್ಮಾ, ವಿನೋದ್‌ಕುಮಾರ್, ಕೃಷ್ಣಪ್ಪ ಇತರರಿದ್ದರು.