ಜಿಲ್ಲೆ

ಹಾಸ್ಟೆಲ್ ಹೊರಗುತ್ತಿಗೆ ನೌಕರರ ವಿಜಯೋತ್ಸವ: ವೇತನ ಹೆಚ್ಚಳ ಮಾಡಿದ್ದಕ್ಕೆ ರಾಜ್ಯಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯಸರ್ಕಾರ ಕನಿಷ್ಟ ವೇತನ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆ ಹೊರಗುತ್ತಿಗೆ ನೌಕರರು ನಗರದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೌಕರರು ಘೋಷಣೆ ಮೊಳಗಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರು, ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ.ಗ್ರೂಪ್ ಸಿಬ್ಬಂದಿ 15 ರಿಂದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ವೇತನ ಹೆಚ್ಚಳ ಸಂಬಂಧ ರಾಜ್ಯ ಮತ್ತು ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿದ ಪ್ರತಿಫಲವಾಗಿ ಏ.11ರಂದು ಕಾರ್ಮಿಕ ಇಲಾಖೆ 4 ವಲಯಗಳ ಬದಲಾಗಿ 3 ವಲಯ ಮಾಡಿದೆ. ಜತೆಗೆ ಕನಿಷ್ಟ ವೇತನ 25,714 ರೂ ನಿಗದಿ ಮಾಡಿ ಗೆಜೆಟಿಯರ್ ನೋಟಿಫಿಕೇಷನ್‌ಗೆ ಕಾರ್ಮಿಕ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಕಳಿಸಿದೆ. ಇದನ್ನು ನಮ್ಮ ಸಂಘ ಸ್ವಾಗತಿಸುತ್ತದೆ ಎಂದರು.

ನೌಕರರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಅಭಿನಂದನೆ ತಿಳಿಸುತ್ತೇವೆ. ಸಂಘದ ಹೋರಾಟಕ್ಕೆ ಜಯ ಸಿಕ್ಕಿದೆ. ಈ ವಿಜಯೋತ್ಸವವನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿಯೂ ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ 35 ಸಾವಿರ ರೂ, ಸೇವಾ ಭದ್ರತೆ, ಕೆಲಸ ಖಾಯಂಗೊಳಿಸುವಂತೆ 15 ವರ್ಷದಿಂದ ಮಾಡುತ್ತಿರುವ ಹೋರಾಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ, ವಿಜಯಾ, ಗೌರಮ್ಮ, ಸವಿತಾ, ಇಂದ್ರಾಣಿ, ಸುನಂದಮ್ಮ, ಮಂಗಳಮ್ಮ ಇತರರಿದ್ದರು.