ಬೆಳಗಾವಿ: ಮಾಂಸಾಹಾರ ಸೇವನೆಯಿಂದ ಕರೊನಾ ಹರಡುವುದಿಲ್ಲ ಎಂದು ವೈದ್ಯಲೋಕವೇ ಹೇಳಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನಾನ್‌ವೆಜ್ ನೀಡದಂತೆ ಸೂಚಿಸಿದ್ದಾರೆ. ಕರೊನಾ ವದಂತಿಗಳಿಗೆ ಇದೀಗ ಅಧಿಕಾರಿಗಳಿಗೇ ಮಣೆ ಹಾಕಿರುವುದು ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಸಮಾಜದಲ್ಲಿನ ಮೌಢ್ಯ ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ರೂಪಿಸುವಲ್ಲಿ ಮಾದರಿಯಾಗಬೇಕಿದ್ದ ಸರ್ಕಾರಿ ಅಧಿಕಾರಿಗಳೇ ಹೀಗೆ ವದಂತಿಗಳಿಗೆ ಭಯಪಟ್ಟಿರುವುದು ವಿಪರ್ಯಾಸ. ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ತಿಂಗಳಿಗೆ ಎರಡು ಬಾರಿ ವಿತರಿಸುತ್ತಿದ್ದ ಮಾಂಸಾಹಾರ ಸೇವನೆ ನಿಲ್ಲಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ 66 ಮೆಟ್ರಿಕ್‌ಪೂರ್ವ, 26 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಇವೆ. ಸದ್ಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಂಸಾಹಾರ ಊಟ ಸ್ಥಗಿತಗೊಳಿಸಲಾಗಿದೆ.
ಸಮಸ್ಯೆ ಆಗರ: ಕುಡಿಯಲು ಶುದ್ಧ ನೀರಿಲ್ಲ, ಪ್ರಯೋಜನಕ್ಕಿಲ್ಲದ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ನಾನಕ್ಕೆ ಬಿಸಿ ನೀರಿಲ್ಲ, ಆವರಣ ಇಲ್ಲವೇ ಶೌಚಗೃಹದಲ್ಲಿ ಕೈ-ಕಾಲು, ಮುಖ ತೊಳೆದುಕೊಳ್ಳುವ ಅನಿವಾರ್ಯತೆ ಎದುರಿಸುತ್ತಲೇ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆ ನಿವಾರಿಸುವಲ್ಲಿ ಆಸಕ್ತಿ ತಾಳದ ಅಧಿಕಾರಿಗಳು ದಿಢೀರನೆ ವಿದ್ಯಾರ್ಥಿಗಳ ಊಟಕ್ಕೂ ಕರೊನಾ ನೆಪದಲ್ಲಿ ಕತ್ತರಿ ಹಾಕುತ್ತಿರುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರು, ಪಾಲಕರು ಪ್ರಶ್ನಿಸುತ್ತಿದ್ದಾರೆ.
ಹಂದಿಗಳ ಉಪಟಳ: ಜಿಲ್ಲೆಯ ಹಾಸ್ಟೆಲೊಂದರ ಅಡುಗೆ ಮನೆಯಲ್ಲಿ ಸಂಗ್ರಹಿಸುವ ತರಕಾರಿ ಸೇರಿ ಇತರ ಪದಾರ್ಥಗಳ ಸಂರಕ್ಷಣೆಗೆ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ. ಪದಾರ್ಥಗಳ ಮೇಲೆ ನೊಣಗಳ ರಾಶಿಯೇ ಕುಳಿತಿರುತ್ತದೆ. ಅದನ್ನು ಸರಿಯಾಗಿ ತೊಳೆಯದೆ ಹಾಗೇ ಅಡುಗೆ ಮಾಡುತ್ತಾರೆಂಬ ಆರೋಪವೂ ಇದೆ. ವಿದ್ಯಾರ್ಥಿನಿಯರು ಕುಳಿತು ಊಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಮೆಟ್ಟಿಲುಗಳ ಮೇಲೆ ಕುಳಿತು ಆಹಾರ ಸೇವಿಸುತ್ತಾರೆ.
ಮಕ್ಕಳಿಗೆ ಅನಾರೋಗ್ಯ: ಇದೇ ಹಾಸ್ಟೆಲ್‌ನಲ್ಲಿಯೇ ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ದೊರೆಯುವುದು ದೂರದ ಮಾತು, ಅಲ್ಲಿ ಸ್ನಾನಕ್ಕೂ ಕೊಳಚೆ ನೀರೇ ಪೂರೈಕೆಯಾಗುತ್ತಿದೆ ಎಂಬ ಆರೋಪವಿದೆ. ಶುದ್ಧ ನೀರಿಲ್ಲದೆ ಅದೇ ನೀರನ್ನು ಬಳಸುತ್ತಿರುವುದರಿಂದ ವಿದ್ಯಾರ್ಥಿನಿಯರಿಗೆ ಆಗಾಗ ತುರಿಕೆ ಮತ್ತು ಕಜ್ಜಿ ಉಂಟಾಗುತ್ತಿದ್ದು, ಚರ್ಮರೋಗದ ಭೀತಿ ಎದುರಿಸುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಎಲ್ಲ ಹಾಸ್ಟೆಲ್‌ಗಳಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪ್ರೌಢ ಮತ್ತು ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಮಾಂಸಾಹಾರ ನೀಡದಿರುವಂತೆ ಯಾವುದೇ ಆದೇಶ ಬಂದಿಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆಯಿಂದಾಗಿ ಚಿಕನ್ ಊಟ ನೀಡುತ್ತಿಲ್ಲ. ಕೆಲವೆಡೆ ವಿದ್ಯಾರ್ಥಿಗಳೇ ಆತಂಕದಿಂದ ಬೇಡ ಎಂದಿದ್ದಾರೆ.
ಉಮಾ ಸಾಲಿಗೌಡರ ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲದ ಕಾರಣ ಒಳ ನುಗ್ಗುವ ಹಂದಿಗಳು ಅಡುಗೆ ಪಾತ್ರೆ ಮತ್ತು ಇತರ ಸಾಮಗ್ರಿಗಳಿಗೆ ಮುಗಿಬಿದ್ದಿರುತ್ತವೆ. ಅಡುಗೆಯವರಿಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ. ‘ನಾವೇನು ಹಂದಿ ಕಾಯುವವರೇ’ ಎಂದು ನಮ್ಮನ್ನೇ ಗದರಿಸುತ್ತಾರೆ. ಇನ್ನು ಸ್ನಾನಕ್ಕೆ ಸ್ವಚ್ಛ ನೀರು ಸಿಗುತ್ತಿಲ್ಲ, ಮೈ ಮೇಲೆಲ್ಲ ಕಜ್ಜಿ ತುರಿಕೆ ಏಳುತ್ತಿದೆ. | ಹೆಸರು ಹೇಳಲಿಚ್ಛಿಸದ ಹಾಸ್ಟೆಲ್ ವಿದ್ಯಾರ್ಥಿನಿ
ಮಾಸ್ಕ್ ಅಥವಾ ಕೈ ವಸ್ತ್ರ ಬಳಸದೇ ಸೀನುವುದು, ಕೆಮ್ಮಿದಾಗ ಕರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ, ಮುನ್ನೆಚ್ಚರಿಕೆಯಾಗಿ ಆಗಾಗ ಸಾಬೂನಿನಿಂದ ಕೈ ತೊಳೆಯಿರಿ ಎಂದು ಆರೋಗ್ಯ ಇಲಾಖೆ ಹಲವು ದಿನಗಳಿಂದ ಅರಿವು ಮೂಡಿಸುತ್ತಲೇ ಇದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಂತಿಲ್ಲ. ವಸತಿ ನಿಲಯಗಳ ಅಡುಗೆ ಕೋಣೆಯಲ್ಲಿ ಕನಿಷ್ಠ ಶುಚಿತ್ವ ಕಾಪಾಡದೇ ಮಾಂಸಾಹಾರ ನಿಲ್ಲಿಸಿಕೊಂಡು ಮುನ್ನೆಚ್ಚರಿಕೆ ಸಬೂಬು ಹೇಳುತ್ತಿದ್ದಾರೆ ಎನ್ನುತ್ತಾರೆ. ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ
ಪಾಲಕರೊಬ್ಬರು.
| ರವಿ ಗೋಸಾವಿ ಬೆಳಗಾವಿ