ತುಮಕೂರು: ಸರ್ಕಾರ ಮಾಡುವ ಕೆಲಸವನ್ನು ರಾಜ್ಯದಲ್ಲಿ ಮಠ ಮಾನ್ಯಗಳು, ಸಂಘ-ಸಂಸ್ಥೆಗಳು ಪರಿಣಾಮಕಾರಿಯಾಗಿ ಮಾಡಿದ ಪರಿಣಾಮ ಎಲ್ಲ ಜಾತಿ, ವರ್ಗ, ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಉಪ್ಪಾರಹಳ್ಳಿಯಲ್ಲಿ ನವೀಕೃತಗೊಂಡಿರುವ ಧರ್ಮಪ್ರವರ್ತ ನಿಡಸಾಲೆಯ ಚನ್ನಂಜಪ್ಪ ಉಚಿತ ವೀರಶೈವ ವಿದ್ಯಾರ್ಥಿನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ವೀರಶೈವ ಸಮಾಜದಲ್ಲಿಯೂ ಕಡುಬಡವರಿದ್ದು, ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದರು.
ಗುಬ್ಬಿಯ ತೋಟದಪ್ಪನವರು 200 ವರ್ಷಗಳ ಹಿಂದೆಯೇ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ನಿರ್ಮಿಸಿದ್ದರು. 75 ವರ್ಷಗಳ ಹಿಂದೆ ಗುಬ್ಬಿಯ ನಿಡಸಾಲೆಯ ಚನ್ನಂಜಪ್ಪ ಅವರು ಸಹ ಹಾಸ್ಟೆಲ್ ನಿರ್ಮಿಸುವ ಮೂಲಕ ಅವರ ಹಾದಿಯಲ್ಲಿ ನಡೆದಿದ್ದಾರೆ. ನಗರ, ಪಟ್ಟಣಗಳಲ್ಲಿ ಶಿಕ್ಷಣಕ್ಕಾಗಿ ಇಂತಹ ಹಾಸ್ಟೆಲ್‌ಗಳ ಅಗತ್ಯ ಸಮುದಾಯದ ವಿದ್ಯಾರ್ಥಿಗಳಿಗಿದೆ. ಹಾಗಾಗಿ, ಉಳ್ಳವರು ಕೈಜೋಡಿಸಿದರೆ ಶಿಕ್ಷಣದಲ್ಲಿ ಸಮುದಾಯ ವಿದ್ಯಾರ್ಥಿಗಳು ಮತ್ತಷ್ಟು ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನಾವು ಕೂಡ ಶಿವಮೊಗ್ಗದಲ್ಲಿ 4 ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದೇವೆ. ಶೀಘ್ರದಲ್ಲಿಯೇ ಹೆಣ್ಣು ಮಕ್ಕಳ ಹಾಸ್ಟೆಲ್ ಸಹ ಆರಂಭವಾಗಲಿದೆ. ಚನ್ನಂಜಪ್ಪ ವಿದ್ಯಾರ್ಥಿನಿಲಯದ ಆಡಳಿತ ಮಂಡಳಿಯವರು ಖಾಲಿ ಜಾಗವನ್ನು ಉಪಯೋಗಿಸಿಕೊಂಡು ಸಂಪನ್ಮೂಲ ಕ್ರೂಢೀಕರಿಸಿ, ವಿದ್ಯಾರ್ಥಿ ನಿಲಯ ನಡೆಸಲು ಅಗತ್ಯವಿರುವ ಆದಾಯ ಉತ್ಪತ್ತಿ ಮಾಡಿಕೊಳ್ಳುವಂತೆ ಷಡಾಕ್ಷರಿ ಸಲಹೆಯಿತ್ತರು.
ವೀರಶೈವ ಮಠಗಳಲ್ಲಿ ವಿದ್ಯಾರ್ಥಿ ನಿಲಯ ಪರಿಕಲ್ಪನೆ ಮಾಡಿದವರಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀ ಜಯದೇವಸ್ವಾಮಿಗಳು, ಆ ನಂತರದಲ್ಲಿ ಎಲ್ಲಾ ಮಠಗಳು ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಠ ಮಾನ್ಯಗಳು, ಸಂಘ ಸಂಸ್ಥೆಗಳ ಮಾಡುವ ಮೂಲಕ ಕರ್ನಾಟಕದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ.ಇದೇ ನಿಟ್ಟಿನಲ್ಲಿ ಗುಬ್ಬಿ ತೋಟದಪ್ಪ, ನಿಡಸಾಲೆಯ ಚನ್ನಂಜಪ್ಪ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಉಚಿತ, ಊಟ ವಸತಿ ನೀಡಲು ಶ್ರಮಿಸಿದ್ದಾರೆ ಎಂದು ಎಡೆಯೂರು ಬಾಳೇಹೊನ್ನೂರಿನ ಶ್ರೀಮದ್ ರಂಭಾಪುರಿ ಶಾಖಾ ಮಠದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
1944ರಲ್ಲಿ ನಿರ್ಮಾಣಗೊಂಡ ಈ ಹಾಸ್ಟೆಲ್ 2010ರವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಆದರೆ 2011ರಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆಂದು ಭೂಸ್ವಾಧೀನ ಮಾಡಿಕೊಂಡಾಗ ಹಾಸ್ಟೆಲ್‌ನ ಕೆಲ ಭಾಗ ಭೂ ಸ್ವಾಧೀನ ಗೊಂಡು, ಉಳಿದ ಭಾಗ ಪಾಳು ಬಿದ್ದಿತ್ತು. ಹಳೆಯ ವಿದ್ಯಾರ್ಥಿಗಳು, ಚನ್ನಂಜಪ್ಪ ವಂಶಸ್ಥರು ಹಾಗೂ ಹಾಸ್ಟೆಲ್ ಸಮಿತಿ ಜತೆಗೂಡಿ ಸುಮಾರು 1.25 ಕೋಟಿ ರೂಪಾಯಿಯಲ್ಲಿ 32 ಸುಸಜ್ಜಿತ ಕೊಠಡಿಗಳನ್ನು ಒಳಗೊಂಡ ಹಾಸ್ಟೆಲ್ ನಿರ್ಮಿಸಲಾಗಿದೆ. ಸುಮಾರು 150 ವಿದ್ಯಾರ್ಥಿಗಳು ಇಲ್ಲಿ ತಂಗಲು ಅವಕಾಶವಿದೆ ಎಂದು ಚನ್ನಂಜಪ್ಪ ಉಚಿತ ವೀರಶೈವ ವಿದ್ಯಾರ್ಥಿನಿಲಯ ಆಡಳಿತ ಮಂಡಳಿ ಕಾರ್ಯದರ್ಶಿ ಧರ್ಮಪಾಲ್ ತಿಳಿಸಿದರು. ಹಾಸ್ಟೆಲ್ ನಿರ್ಮಾಣ ಸಮಿತಿಯ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಅರುಣಕುಮಾರ್, ಸದಸ್ಯರಾದ ಸಿ.ಎಸ್.ಕುಮಾರಸ್ವಾಮಿ, ಸಿ.ಎಸ್.ಶಿವಪ್ರಸಾದ್, ಗುರುಮಲ್ಲಿಕಾರ್ಜುನ್, ಧರ್ಮಶಂಕರ್ ರಾಜು, ಶಿವಜೋತಿ, ಹಳೆಯ ವಿದ್ಯಾರ್ಥಿ ಸದಾಶಿವಯ್ಯ, ನಂಜುಂಡಪ್ಪ, ಸಿದ್ದರಾಮಯ್ಯ, ಸರ್ವಮಂಗಳ, ಪಾಲಿಕೆ ಸದಸೆ ಕೆ.ಎಸ್.ಮಂಜುಳಾ, ವೀರಶೈವ ಲಿಂಗಾಯಿತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರೇಣುಕಾರಾಧ್ಯ, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ವೀರಶೈವ ಸಮುದಾಯದಲ್ಲಿರುವ ಒಳಪಂಡಗಡಗಳ ಭಿನ್ನಮತವನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ರೀತಿಯಲ್ಲಿ ಸಮಾಜದ ಕೆಲಸಕ್ಕೆ ದುಡಿಯೋಣ. ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ ಬಾಳೆಹೊನ್ನೂರು ಶಾಖಾಮಠ, ಎಡೆಯೂರು