ಬಳ್ಳಾರಿ: ಸಾರ್ವಜನಿಕ ಹಿತದೃಷ್ಟಿಯಿಂದ ಕರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸೇವಾ ಸಿಂಧು ಆ್ಯಪ್ ಮೂಲಕ ಪಾಸ್ ಪಡೆದವರಿಗೆ ಮಾತ್ರ ಜಿಲ್ಲೆಯ ಗಡಿಯೊಳಗೆ ಬರಲು ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಜಿಲ್ಲೆಯ ಆಯ್ದ ವಸತಿ ನಿಲಯಗಳಲ್ಲಿ ಉಚಿತವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಲಾಡ್ಜ್‌ಗಳಲ್ಲಿ ಇರಲು ಇಚ್ಛಿಸುವವರು ಕ್ವಾರಂಟೈನ್ ಅವಧಿಗೆ ತಗಲುವ ವೆಚ್ಚ ಭರಿಸಬೇಕಾಗುತ್ತದೆ. ಹೋಟೆಲ್‌ಗೆ ದಾಖಲಾಗುವ ದಿನವೇ ಮೊತ್ತವನ್ನು ಮುಂಗಡ ಪಾವತಿಸಬೇಕು. 14 ದಿನಗಳ ಅವಧಿಗೆ ನಗರದ ಹೋಟೆಲ್ ಬಾಲಾ ರೀಜೆನ್ಸಿ ಹಾಗೂ ತೋರಣಗಲ್‌ನ ಜಿಂದಾಲ್ ಸ್ಟೀಲ್ ರಾಕ್ ರೀಜೆನ್ಸಿ ಹೋಟೆಲ್‌ನಲ್ಲಿ (ನಾನ್ ಎಸಿ, ಟ್ವೀನ್ ಡಿಲಕ್ಸ್) ಉಪಾಹಾರ, ಊಟ ಮತ್ತು ವೈಫೈ ಸೌಲಭ್ಯಗಳೊಂದಿಗೆ 19,600 ರೂ. ಹಾಗೂ ಜಿಎಸ್‌ಟಿ ಶುಲ್ಕ ಪ್ರತ್ಯೇಕ ಪಾವತಿ ಮಾಡಬೇಕು. ನಗರದ ಹೋಟೆಲ್ ಆಶೋಕ ಕಂಫರ್ಟ್ಸ್, ಹೋಟೆಲ್ ಚಾಲುಕ್ಯ ಡೀಲಕ್ಸ್ ಲಾಡ್ಜ್‌ನಲ್ಲಿ ಉಪಾಹಾರ ವ್ಯವಸ್ಥೆಯೊಂದಿಗೆ ಸುಮಾರು 10 ಸಾವಿರ ರೂ. ಪಾವತಿಸಬೇಕು. ಸಾಂಸ್ಥಿಕ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಯಾರೂ ಭಯಪಡುವ ಅಗತ್ಯ ಇಲ್ಲ. ಕರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯ ವಾಣಿ ಸಂಖ್ಯೆ 104 ಅಥವಾ 08392-277100 ಇಲ್ಲವೇ ವಾಟ್ಸ್ ಆ್ಯಪ್ ಸಂಖ್ಯೆ 8277888866 ಮೂಲಕ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.