ಮೈಸೂರು: ದಸರಾ ಸಂದರ್ಭದಲ್ಲಿ ಮೈಸೂರಿನ ಹೋಟೆಲ್‌ಗಳಲ್ಲಿ ಅತಿಥಿಗಳಿಗೆ ಸಮರ್ಪಕ ಸೇವೆಯನ್ನು ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೋಟೆಲ್‌ಗಳ ಪ್ರತಿನಿಧಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ಸಂಬಂಧ ಹೋಟೆಲ್ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಸರಾ ನಾಡಿನ ಸಾಂಸ್ಕೃತಿಕ ಪ್ರತೀಕ. ನಾಡಹಬ್ಬಕ್ಕಾಗಿ ದೇಶ, ವಿದೇಶಗಳಿಂದ ಸಹಸ್ರಾರು ಜನರು ಆಗಮಿಸುತ್ತಾರೆ. ಆದ್ದರಿಂದ ಯಾವುದೇ ಲೋಪವಾಗದಂತೆ ಉತ್ತಮ ರೀತಿಯಲ್ಲಿ ಅತಿಥಿ ಸತ್ಕಾರ, ಕೊಠಡಿಗಳ ನಿರ್ವಹಣೆ ಮಾಡಬೇಕು. ಇದರೊಂದಿಗೆ ದಸರಾವನ್ನು ಯಶಸ್ವಿಗೊಳಿಸಲು ಹೋಟೆಲ್ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಉಪವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಮಹೇಶ್ ಹಾಗೂ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸೇರಿದಂತೆ ವಿವಿಧ ಹೋಟೆಲ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.