filter: 0; fileterIntensity: 0.0; filterMask: 0; module: j; hw-remosaic: 0; touch: (0.6044445, 0.6044445); modeInfo: ; sceneMode: NightHDR; cct_value: 0; AI_Scene: (6, -1); aec_lux: 81.153336; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಸಮಸ್ಯೆಗಳ ನಡುವೆಯೂ ಉತ್ತಮ ಸೇವೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಹೊಸಕೋಟೆ

ಸಿಬ್ಬಂದಿ ಕೊರತೆ, ಸ್ಥಳಾವಕಾಶದ ಸಮಸ್ಯೆ, ಸಿಬ್ಬಂದಿಗೆ ವಸತಿಗೃಹದ ಕೊರತೆ, ಕಟ್ಟಡದ ಬಳಿ ಹಾದುಹೋಗಿರುವ ಚರಂಡಿಗಳ ನಿರ್ವಹಣೆ ಕೊರತೆಯಂಥ ಕೆಲವೊಂದು ಸಮಸ್ಯೆಗಳ ಹೊರತಾಗಿಯೂ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಸೇವೆಯಲ್ಲಿ ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ಸರ್ಕಾರಿ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ 60 ಹಾಸಿಗೆಗಳ ಸುಸಜ್ಜಿತ ಕಟ್ಟಡವಿದ್ದು ದಿನದ 24 ಗಂಟೆಯೂ ವೈದ್ಯಸೇವೆಗೆ ಮುಕ್ತವಿದೆ. ಆಸ್ಪತ್ರೆಯಲ್ಲಿ ಐಸಿಯು, ಜನರಲ್, ಮಕ್ಕಳು ಹಾಗೂ ಹೆರಿಗೆ ವಾರ್ಡ್‌ಗಳು ಪ್ರತ್ಯೇಕವಿದ್ದು ಹೆರಿಗೆ ಹಾಗೂ ಬಾಣಂತಿಯರಿಗೆ ದಿನದ ಮೂರು ಹೊತ್ತು ಆಸ್ಪತ್ರೆಯಲ್ಲಿಯೇ ಉಪಹಾರ ವ್ಯವಸ್ಥೆ ಇದೆ. ಆದರೆ ಇ ಅಂಡ್ ಟಿ ವಿಭಾಗದ ವೈದ್ಯರ ನಿವೃತ್ತಿ ಕಾರಣ ಆ ವಿಭಾಗಕ್ಕೆ ಇದುವರೆಗೆ ವೈದ್ಯರ ನೇಮಕವಿಲ್ಲದೆ ಇಂಥ ಸಮಸ್ಯೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.

ಪ್ರತಿ ದಿನ ಕನಿಷ್ಟ 600 ರೋಗಿಗಳು ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಪಡೆಯುತ್ತಾರೆ ಪ್ರತಿ ತಿಂಗಳು ಸುಮಾರು 80 ರಷ್ಟು ಹೆರಿಗೆ ಪ್ರಕರಣಗಳು ನಡೆಯುತ್ತವೆ, ಇದುವರೆಗಿನ ಅಂಕಿಅಂಶದಂತೆ ಈ ವಿಷಯದಲ್ಲಿ ಆಸ್ಪತ್ರೆಗೆ ಉತ್ತಮ ಹೆಸರಿದೆ.

ಡಿ ಗ್ರೂಪ್ ನೌಕರರ ಕೊರತೆ: ಆಸ್ಪತ್ರೆಗೆ 33 ಡಿ ಗ್ರೂಪ್ ನೌಕರರನ್ನು ನೀಡಬೇಕಿದ್ದ ಆರೋಗ್ಯ ಇಲಾಖೆ ಕೇವಲ ಇಬ್ಬರನ್ನು ನಿಯೋಜನೆ ಮಾಡಿರುವುದು ವೈದ್ಯಸೇವೆಗೆ ತೊಡಕಾಗಿದೆ. ಸರ್ಕಾರಿ ಆದೇಶದಂತೆ ಇನ್ನುಳಿದ ಖಾಲಿ ಹುದ್ದೆಗೆ ಶೇ.40 ರ ಆಧಾರದಲ್ಲಿ ಹೊರಗುತ್ತಿಗೆಯವರನ್ನು ಮಾಡಿಕೊಳ್ಳಲಾಗಿದ್ದು ಪ್ರಸ್ತುತ 14 ಡಿ ಗ್ರೂಪ್ ನೌಕರರು ಕೆಲಸ ಮಾಡುತಿದ್ದಾರೆ.

ಮೋರಿ ವಾಸನೆ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ 75 ರ ಸರ್ವಿಸ್ ರಸ್ತೆಗೆ ಆಸ್ಪತ್ರೆ ಹೊಂದಿಕೊಂಡಿದೆ, ಚಿಂತಾಮಣಿ ಹಾಗೂ ಮಾಲೂರು ಮುಖ್ಯ ರಸ್ತೆಯಿಂದ ಹೊಸಕೋಟೆ ಹಾಗೂ ಬೆಂಗಳೂರು ಕಡೆಗೆ ಅತಿ ಹೆಚ್ಚು ವಾಹನ ಸಂಚಾರವಿದ್ದು ರಸ್ತೆಗಳು ಹಾಳಾಗಿವೆ. ಧೂಳಿನ ಸಮಸ್ಯೆ ಎದುರಾಗಿದೆ ಜತೆಗೆ ಮುಂಭಾಗದ ರಸ್ತೆಯಲ್ಲಿ ಮೋರಿಗಳು ನಿರ್ವಹಣೆ ಕೊರತೆ ಎದುರಿಸುತ್ತಿದ್ದು ಈ ಭಾಗದಲ್ಲಿ ಗಬ್ಬುವಾಸನೆ ಹರಡುತ್ತಿದೆ.

ಖಾಸಗಿ ಆಸ್ಪತ್ರೆಯಲ್ಲಿ ಜ್ವರ ಎಂದರೂ ಕನಿಷ್ಟ 1 ಸಾವಿರ ರೂ.ತೆರಬೇಕಾಗುತ್ತದೆ, ಇಲ್ಲಿನ ಆಸ್ಪತ್ರೆಯಲ್ಲಿ ಇಂಥ ಸಮಸ್ಯೆ ಇಲ್ಲ. ಇಲ್ಲಿನ ವೈದ್ಯರು ರೋಗಿಗಳನ್ನು ಚೆನ್ನಾಗಿ ಉಪಚರಿಸುತ್ತಾರೆ. ಇದುವರೆಗೆ ನಮ್ಮ ಕುಟುಂಬದ ಯಾರೋಬ್ಬರು ಈ ಆಸ್ಪತ್ರೆ ಬಿಟ್ಟು ಬೇರೆ ಕಡೆ ಹೋಗಿದ್ದಿಲ್ಲ. ಆಸ್ಪತ್ರೆಯಲ್ಲಿನ ವೈದ್ಯ ಸೇವೆ ಹೀಗೆ ಮುಂದುವರೆಯಲಿ ಎಂಬುದು ನಮ್ಮ ಆಶಯ.

ರಮಣಾ ಚಾರಿ, ಹೊಸಕೋಟೆ.

ಪ್ರತಿ ದಿನ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸ್ಥಳಾವಕಾಶದ ಕೊರತೆ ಎದುರಾಗುತ್ತಿದೆ ಜತಗೆ ಇಲ್ಲಿಯ ವೈದ್ಯರು ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲಿರಲು ವ್ಯವಸ್ಥೆ ಮಾಡಿಕೊಡಬೇಕಿದೆ, ಸದ್ಯ ನಗರದ ಹೊರವಲಯದಲ್ಲಿ 100 ಹಾಸಿಗೆಯ ತಾಯಿ ಮಗು ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದ್ದು ವೈದ್ಯರ ವಾಸಕ್ಕೂ ವಸತಿಗೃಹ ನಿರ್ಮಾಣವಾಗುತ್ತಿದೆ, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಿದೆ. ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಶೀಘ್ರ ಸಿಬ್ಬಂದಿ ನೇಮಕವಾಗುವ ಭರವಸೆ ಇದೆ.

ಡಾ ಸತೀಶ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ