ಜಿಲ್ಲೆ

ಲೇಡಿಗೋಷನ್‌ನಲ್ಲಿ ಸಂದರ್ಶಕರಿಗಿಲ್ಲ ವ್ಯವಸ್ಥೆ

Dakshina Kannada

ಭರತ್ ಶೆಟ್ಟಿಗಾರ್ ಮಂಗಳೂರು

ಕರಾವಳಿ ಕರ್ನಾಟಕ ಮಾತ್ರವಲ್ಲದೆ ಕೇರಳದ ಕಾಸರಗೋಡು, ಬಯಲುಸೀಮೆ ಭಾಗದಲ್ಲೂ ಹೆಸರುವಾಸಿಯಾಗಿರುವ ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ, ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ ಹಳೇ ಕಟ್ಟಡದಲ್ಲಿರುವಾಗ ಇದ್ದ ಕೆಲವೊಂದು ಸಮಸ್ಯೆಗಳು ಇಂದಿಗೂ ಹಾಗೇ ಉಳಿದಿವೆ.

ಹಳೇ ಕಟ್ಟಡ ಕೆಡವಿ ಆವರಣದಲ್ಲಿ ವಿವಿಧ ವಿಭಾಗಗಳಿಗೆ ಹೊಸ ಹೊಸ ಕಟ್ಟಡಗಳು ತಲೆ ಎತ್ತುತ್ತಿದ್ದು, ಖಾಸಗಿ ಆಸ್ಪತ್ರೆಗೆ ಸಮನಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ಮುಖ್ಯವಾಗಿ ಆಸ್ಪತ್ರೆಯಲ್ಲಿರುವ ಬಾಣಂತಿಯರನ್ನು ನೋಡಲು ಬರುವವರಿಗೆ, ಮನೆಯವರಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಮಳೆ-ಬಿಸಿಲೆನ್ನದೆ ಆಸ್ಪತ್ರೆ ಹೊರಗೆ ಕಾಯಬೇಕಾದ ಪರಿಸ್ಥಿತಿ ಇದೆ. ಪುರುಷರು ಮಾತ್ರವಲ್ಲದೆ ಮಹಿಳೆಯರೂ ಹೊರಗೆ ಕಾಯುತ್ತಿರುವುದು ಪ್ರತಿನಿತ್ಯದ ದೃಶ್ಯ.

ಪಾರ್ಕಿಂಗ್ ಜಾಗ, ಕುಡಿಯುವ ನೀರಿನ ಘಟಕದ ಬಳಿ, ಅಧೀಕ್ಷಕರ ಕಟ್ಟಡದ ಕಿಟಕಿಯ ಖಾಲಿ ಜಾಗದಲ್ಲಿ, ಗೋಡೆ ಬದಿಯ ಸಣ್ಣ ದಂಡೆಗಳಲ್ಲಿ, ಸ್ಟ್ರೆಚರ್, ವೀಲ್‌ಚೇರ್‌ಗಾಗಿ ನಿರ್ಮಿಸಿರುವ ರ‌್ಯಾಂಪ್‌ನಲ್ಲಿ, ಮೆಟ್ಟಿಲುಗಳಲ್ಲಿ ಹೀಗೆ ಸಿಕ್ಕ ಸಿಕ್ಕ ಜಾಗದಲ್ಲಿ ಕುಳಿತುಕೊಳ್ಳುವುದು, ನಿಂತುಕೊಂಡಿರುವವರು ಕಾಣಸಿಗುತ್ತಾರೆ. ಕಾವಲು ಸಿಬ್ಬಂದಿ ಮಳೆಗೆ ಸ್ವಲ್ಪ ಹೊತ್ತು ನಿಲ್ಲಲು ಅವಕಾಶ ನೀಡುತ್ತಾರಾದರೂ, ಬಿಸಿಲು ಇರುವಾಗ ಜಾಗ ಖಾಲಿ ಮಾಡುವಂತೆ ತಿಳಿಸುತ್ತಾರೆ.

ದೂರದ ಊರುಗಳಿಂದ ಗರ್ಭಿಣಿಯೊಂದಿಗೆ ಬಂದು ಹೆರಿಗೆಯಾಗಿ ಡಿಸ್ಚಾರ್ಜ್ ಆಗುವವರೆಗೂ ಆವರಣದಲ್ಲೇ ನಿಲ್ಲುವವರೂ ಇದ್ದಾರೆ. ಆಸ್ಪತ್ರೆ ಆವರಣದಲ್ಲಿ ಶೀಟ್ ಅಳವಡಿಸಿ ಶೆಡ್ ರಚಿಸಿ, ಕಬ್ಬಿಣದ ಕುರ್ಚಿ ಅಳವಡಿಸುವುದು ಉತ್ತಮ. ಇದರಿಂದ ಮಳೆಯಿಂದ ರಕ್ಷಣೆ, ಬಿಸಿಲಿನಿಂದ ನೆರಳು ಸಿಕ್ಕಂತೆಯೂ ಆಗುತ್ತದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಕೋವಿಡ್ ಬಳಿಕ ಕಟ್ಟುನಿಟ್ಟು: ಕೋವಿಡ್ ಹಾವಳಿ ಬಳಿಕ ಆಸ್ಪತ್ರೆಯಲ್ಲಿ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಸೋಂಕು ಭೀತಿಯಿಂದಾಗಿ ದಾಖಲಾತಿ ಸಂದರ್ಭ ಬಂದವರೇ ಕೊನೇವರೆಗೆ ಗರ್ಭಿಣಿ, ಬಾಣಂತಿ ಜತೆ ಇರಬೇಕು. ಹಿಂದೆ ಇದ್ದ ಹಾಗೆ ನಾಲ್ಕೈದು ಮಂದಿ ಸಂದರ್ಶಕರು ಏಕಕಾಲದಲ್ಲಿ ಒಳಗೆ ಹೋಗುವಂತಿಲ್ಲ. ಒಬ್ಬರು ನೋಡಿ ಬಂದ ಬಳಿಕವಷ್ಟೇ ಇನ್ನೊಬ್ಬರು ನೋಡಿ ಬರಬಹುದು. ಯಾವಾಗ ತುರ್ತು ಕರೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೊರಗೆ ಯಾರಾದರೂ ಇರಲೇಬೇಕು.

ಆಸ್ಪತ್ರೆ ಒಳಗೆ ಗರ್ಭಿಣಿ, ಬಾಣಂತಿಯರೊಂದಿಗೆ ಹೆಣ್ಮಕ್ಕಳಿಗೆ ಮಾತ್ರ ನಿಲ್ಲಲು ಅವಕಾಶ. ಪುರುಷರು ನಿಗದಿತ ಸಮಯದಲ್ಲಿ ಮಾತ್ರ ಒಳಗೆ ಹೋಗಿ ನೋಡಿ ಬರಬಹುದು. ತುರ್ತು ಅವಶ್ಯಕತೆ ಬಂದಾಗ ಆಚೀಚೆ ಓಡಾಡಲು ಹಗಲು-ರಾತ್ರಿ ಆಸ್ಪತ್ರೆ ಹೊರಗೆ ನಿಲ್ಲುವುದು ಅನಿವಾರ್ಯ. ಆದರೆ ಇಲ್ಲಿ ವ್ಯವಸ್ಥೆ ಇಲ್ಲ. ಕನಿಷ್ಠ ಒಂದು ಮೇಲ್ಛಾವಣಿ ನಿರ್ಮಿಸಿ ಕುರ್ಚಿ ಅಳವಡಿಸಿದರೆ ಸಾಕಿತ್ತು.

ಶೈಲೇಶ್ ಕುಮಾರ್ ಪುತ್ತೂರು ನಿವಾಸಿ

ಮೂಲಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರ ಶೀಟ್ ಛಾವಣಿ ನಿರ್ಮಿಸಿ, ಕುರ್ಚಿಗಳನ್ನು ಅಳವಡಿಸಿ ಸಂದರ್ಶಕರಿಗೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಎಲ್ಲಿ ಮತ್ತು ಹೇಗೆ ಅಳವಡಿಸಬೇಕು ಎನ್ನುವ ಕುರಿತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕರಿಗೆ ಪತ್ರಬರೆಯಲು ಆಸ್ಪತ್ರೆ ಅಧೀಕ್ಷಕರಿಗೆ ಸೂಚನೆ ನೀಡಿದ್ದೇನೆ.

ವೇದವ್ಯಾಸ ಕಾಮತ್ ಶಾಸಕರು