ಜಿಲ್ಲೆ

ಕಕ್ಕರಗೊಳ್ಳ ಆರೋಗ್ಯ ಕೇಂದ್ರಕ್ಕೆ ಆಯುಷ್ಮಾನ್ ಕಾಯಕಲ್ಪ

ಧನಂಜಯ ಎಸ್.ಹಕಾರಿ ದಾವಣಗೆರೆ
ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಸಗಿ ಆಸ್ಪತ್ರೆಯ ಸ್ಪರ್ಶ ನೀಡಲಾಗಿದೆ.

ಹೌದು. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಕ್ಕೆ ಆಯುಷ್ಮಾನ್ ಆರೋಗ್ಯ ಕರ್ನಾಟಕದಿಂದ ದೊರೆಯುವ 5 ಲಕ್ಷ ರೂ. ಅನುದಾನದಲ್ಲಿ ಕಾಯಕಲ್ಪ ಕಲ್ಪಿಸಲಾಗಿದ್ದು, ಮಾದರಿ ಆಸ್ಪತ್ರೆಯಾಗಿ ರೂಪುಗೊಂಡಿದೆ.

ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಫಿಲ್ಟರ್ ವ್ಯವಸ್ಥೆ, 6 ಬೆಡ್‌ಗಳು, ಹೊಸ ಪೀಠೋಪಕರಣಗಳು, ವಾಷಿಂಗ್ ಮಷಿನ್, ಬೇಬಿ ಫ್ರೆಂಡ್ಲಿ ಲಸಿಕಾ ಕೊಠಡಿಯನ್ನು ಹೊಸದಾಗಿ ನಿರ್ಮಿಸಲಾಗಿದೆ.

ಆಸ್ಪತ್ರೆ ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ.

ಸುತ್ತ-ಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ರೋಗಿಗಳು ಆರೋಗ್ಯ ಕೇಂದ್ರಕ್ಕೆ ಬಂದರೆ ಅವರ ಮನಸ್ಸಿಗೆ ಮುದ ನೀಡುವಂತಹ ವಾತಾವರಣ ನಿರ್ಮಿಸಲಾಗಿದೆ.

ಆರೋಗ್ಯ ಕೇಂದ್ರದ ವಾರ್ಡ್‌ನಲ್ಲಿ 6 ಬೆಡ್‌ಗಳಿದ್ದು ಸೊಳ್ಳೆ ಪರದೆ, ಕಿಟಕಿಗಳಿಗೆ ಮೆಶ್ ಹಾಗೂ ಕರ್ಟನ್ ಹಾಕಲಾಗಿದೆ. ಒಳರೋಗಿಗಳ ಕೊಠಡಿಗಳಿಗೆ ಸೊಳ್ಳೆಗಳು ಬಾರದಂತೆ ಎಚ್ಚರವಹಿಸಲಾಗಿದೆ.

ಸಾಮಾನ್ಯ ರೋಗಗಳಾದ ವಾಂತಿ, ಭೇದಿ, ಜ್ವರ, ಕೆಮ್ಮು, ನಿಶ್ಯಕ್ತಿ, ಡಿಹೈಡ್ರೇಷನ್, ಅಸಿಡಿಟಿ, ವಿಷ ಕುಡಿದವರಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ.

ಆವರಗೊಳ್ಳ, ಕೋಡಿಹಳ್ಳಿ, ಕೊಂಡಜ್ಜಿ ಗ್ರಾಮ ಸೇರಿ ಇತರ ಚಿಕ್ಕ-ಪುಟ್ಟ ಹಳ್ಳಿಗಳ ಜನರು ಆರೋಗ್ಯ ತಪಾಸಣೆಗೆ ಕಕ್ಕರಗೊಳ್ಳ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಐವರು ಔಟ್ ಸರ್ಜನ್, ಇಬ್ಬರು ಪಿಜಿ ಸ್ಟೂಡೆಂಟ್ಸ್, ಅಲೋಪತಿ ವೈದ್ಯರು ಹಾಗೂ ಆಯುಷ್ ಪದ್ಧತಿ ನಿರ್ವಹಿಸುವ ವೈದ್ಯರೊಬ್ಬರು ಪ್ರತಿದಿನ ಬರುವ ರೋಗಿಗಳನ್ನು ತಪಾಸಣೆ ಮಾಡುತ್ತಾರೆ.

ಸಾಮಾನ್ಯವಾಗಿ 70 ರಿಂದ 100 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಜಿಲ್ಲಾಸ್ಪತ್ರೆಗೆ ಬರೆಯಲಾಗುವುದು.

ಇಲ್ಲವಾದಲ್ಲಿ ಒಳ ರೋಗಿಗಳಾಗಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರತೆಗೆ ಸಿಸಿ ಕ್ಯಾಮೆರಾ: ಆಸ್ಪತ್ರೆಯ ಭದ್ರತೆಯ ದೃಷ್ಟಿಯಿಂದ 6 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು,

ಆರೋಗ್ಯ ಕೇಂದ್ರದ ಸುತ್ತಲ ಪ್ರದೇಶದಲ್ಲಿನ ಕಾರ್ಯ ಚಟುವಟಿಕೆಗಳನ್ನು ಆಸ್ಪತ್ರೆಯಲ್ಲಿ ಕುಳಿತು ಗಮನಿಸಬಹುದಾಗಿದೆ.

ರೋಗಿಗಳಿಗೆ ಕೌನ್ಸೆಲಿಂಗ್: ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರ ಬಳಿ ತೆರಳುವ ಮುನ್ನ ಯಾವ ತೊಂದರೆ ಇದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳು ಕೌನ್ಸೆಲಿಂಗ್ ನಡೆಸಲಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿರುವ ವ್ಯವಸ್ಥೆಯನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಣಬಹುದು.

ಶಿಥಿಲಾವಸ್ಥೆಯಲ್ಲಿದ್ದ ಕಕ್ಕರಗೊಳ್ಳ ಆಸ್ಪತ್ರೆಯ ಕಟ್ಟಡಕ್ಕೆ ಮರುಜೀವ ದೊರಕಿದೆ. ಮಾದರಿ ಆರೋಗ್ಯ ಕೇಂದ್ರವಾಗಿ ರೂಪುಗೊಂಡಿದ್ದು, ರೋಗಿಗಳಿಗೆ ಅತ್ಯುತ್ತಮ ಸೇವೆ ದೊರೆಯಲಿದೆ ಎಂಬ ವಿಶ್ವಾಸವಿದೆ.ವೆಂಕಟೇಶ್, ತಾಲೂಕು ವೈದ್ಯಾಧಿಕಾರಿ
ಉತ್ತಮ ಸೌಲಭ್ಯಗಳನ್ನು ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಮ್ಮ ಗ್ರಾಮದಲ್ಲಿ ಇರುವುದು ಹೆಮ್ಮೆ ಎನಿಸುತ್ತದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು.ಗುತ್ಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ