ಜಿಲ್ಲೆ

ಆಸ್ಪತ್ರೆ ಹೈಟೆಕ್, ಸಮಸ್ಯೆ ಹೈಕ್ಲಾಸ್

ಲೋಕೇಶ್ ಮನು. ಡಿ

ಸೋಮವಾರಪೇಟೆ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ನೋಡಿದರೆ ಹೈಟೆಕ್ ಎಂಬಂತೆ ಕಂಡು ಬಂದರೂ ಸಮಸ್ಯೆಗಳು ಕೂಡ ಹೈಕ್ಲಾಸ್ ಆಗಿವೆ. ಇದರಿಂದ ಸೂಕ್ತ ಚಿಕಿತ್ಸೆಗಾಗಿ ಬಡವರು ಪರದಾಡುವಂತಾಗಿದೆ.


ಪಟ್ಟಣದಲ್ಲಿ ನಿರ್ಮಾಣವಾಗಿರುವ ತಾಲೂಕು ಆರೋಗ್ಯ ಕೇಂದ್ರ ಕೋಟಿ ರೂ. ವೆಚ್ಚದ 300 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ. ತಾಲೂಕಿನ 58 ಗ್ರಾಮಗಳ ರೋಗಿಗಳು ಈ ಆಸ್ಪತ್ರೆಯನ್ನು ಅವಲಂಭಿಸಿದ್ದಾರೆ. ಪ್ರತಿನಿತ್ಯ 300ರಿಂದ 400 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ತಪಾಸಣೆ ಮಾಡಬೇಕಾದ ತಜ್ಞ ವೈದ್ಯರು ಸಿಗುವುದೇ ಅಪರೂಪ ಎಂಬಂತಾಗಿದೆ.


ಶಸ್ತ್ರಚಿಕಿತ್ಸಾ ಘಟಕ, ಅಪಘಾತ ಹಾಗೂ ತುರ್ತು ಸೇವಾ ಘಟಕ, ಡಯಾಲಿಸಿಸ್ ಸೇವೆ, ಹೆರಿಗೆ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, 12 ಹಾಸಿಗೆಯುಳ್ಳ ತುರ್ತು ಚಿಕಿತ್ಸಾ ಘಟಕ, ಎಕ್ಸ್ ರೇ ಘಟಕ, ಹೈಟೆಕ್ ರಕ್ತ ಪರೀಕ್ಷಾ ಕೇಂದ್ರ ಎಲ್ಲವೂ ಇದೆ. ವೈದ್ಯರಿಗೆ ಸುಸಜ್ಜಿತ ವಸತಿ ಗೃಹ ಎಲ್ಲವೂ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 95 ಲಕ್ಷ ರೂ., ವೆಚ್ಚದಲ್ಲಿ ಅಮ್ಲಜನಕ ಉತ್ಪಾದನಾ ಘಟಕವೂ ಪ್ರಾರಂಭವಾಗಿದೆ. ಈಗ 60 ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಸಹ ಕಾಮಗಾರಿ ಮುಕ್ತಾಯವಾಗಿದ್ದು, ಘಟಕ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 30 ರೋಗಿಗಳಿಗೆ ಏಕಕಾಲದಲ್ಲಿ ಶುದ್ಧ ಆಮ್ಲಜನಕ ಸರಬರಾಜು ಮಾಡಲು ಪೈಪ್‌ಲೈನ್ ಕೂಡ ಅಳವಡಿಸಲಾಗಿದೆ.


ಅದರಂತೆ ಆಸ್ಪತ್ರೆಗೆ 15 ತಜ್ಞ ವೈದ್ಯರ ಹುದ್ದೆ ಮಂಜೂರು ಆಗಿದ್ದರೂ ಕೇವಲ 8 ವ್ಯೆದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 8 ಹುದ್ದೆಗಳು ಖಾಲಿ ಇವೆ. ಡಿ ಗ್ರೂಪ್ ನೌಕರರ 32 ಹುದ್ದೆಗಳು ಖಾಲಿ ಇವೆ. 24 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತುಕ್ಕು ಹಿಡಿಯುತ್ತಿವೆ ಸಲಕರಣೆ: ಶಸ್ತ್ರಚಿಕಿತ್ಸಕರು, ಮಕ್ಕಳ ತಜ್ಞ, ಅರಿವಳಿಕೆ ತಜ್ಞ, ನೇತ್ರತಜ್ಞ, ರೇಡಿಯಾಲಜಿಸ್ಟ್, ತುರ್ತು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಬಿದ್ದಿವೆ. ಅರಿವಳಿಕೆ ತಜ್ಞರಿಲ್ಲದೆ, ಶಸ್ತ್ರಚಿಕಿತ್ಸಾ ಘಟಕದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಇದರಿಂದ ಬಡವರು ಅಗತ್ಯ ಚಿಕಿತ್ಸೆಗಳಿಗೆ ಜಿಲ್ಲಾ ಕೇಂದ್ರ ಮಡಿಕೇರಿಯನ್ನೇ ಅವಲಂಭಿಸಬೇಕಾಗಿದೆ. ಎನ್‌ಆರ್‌ಎಚ್‌ಎಂ ಗುತ್ತಿಗೆ ಆಧಾರದ ಮೇಲೆ ಇಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಹಾಯಕ ಆಡಳಿತಾಧಿಕಾರಿ 1 ಹುದ್ದೆ, ಪ್ರಥಮ ದರ್ಜೆ ಸಹಾಯಕರು 2, ಟೈಪಿಸ್ಟ್, ರೆಕಾರ್ಡ್ ಕೀಪರ್, ಶುಶ್ರೂಷಾ ಅಧೀಕ್ಷಕರು, 5 ಅರೋಗ್ಯ ಸಹಾಯಕಿಯರು, ಪ್ರಯೋಗಶಾಲಾ ತಂತ್ರಜ್ಞ, ಜೂನಿಯರ್ ಫಾರ್ಮಸಿಸ್ಟ್, ಎಲೆಕ್ಟ್ರಿಷಿಯನ್, ಇಸಿಜಿ ತಂತ್ರಜ್ಞ, ವಾಹನ ಚಾಲಕ ಇವೆಲ್ಲ ಹುದ್ದೆಗಳ ಖಾಲಿ ಇದ್ದು, ವರ್ಷಗಳೇ ಕಳೆದಿವೆ. ಇಂತಹ ವ್ಯವಸ್ಥೆಯಿಂದ ಬಡರೋಗಿಗಳು ತಾಲೂಕು ಆಸ್ಪತ್ರೆಯಲ್ಲಿ ಎಂತಹ ಚಿಕಿತ್ಸೆ ನಿರೀಕ್ಷಿಸಬಹುದು?. ಜನಪ್ರತಿನಿಧಿಗಳು ಅನೇಕ ವರ್ಷಗಳಿಂದ ಸಬೂಬು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ.

ಒತ್ತಡದಲ್ಲೇ ಕೆಲಸ: ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕು. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಸೂಕ್ತ ಚಿಕಿತ್ಸೆ ಸಿಗುವುದೇ ಅನುಮಾನ. ಇದರಿಂದ ವೈದ್ಯರು ಒತ್ತಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.
ಒಟ್ಟಿನಲ್ಲಿ ಸುಸಜ್ಜಿತ ಕಟ್ಟಡ, ಅಗತ್ಯ ಸಲಕರಣೆ, ಯಂತ್ರೋಪಕರಣ ಇದ್ದರೂ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದೆ ತಾಲೂಕು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಂದ ದೂರವಾಗುತ್ತಿದೆ.