ಜಿಲ್ಲೆ

40 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ

Kolar

ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ತ್ವರಿತವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ಮಂಚೇನಹಳ್ಳಿಯಲ್ಲಿ ಶನಿವಾರ ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿ ಮಾತನಾಡಿ, 40 ಕೋಟಿ ರೂ. ವೆಚ್ಚದಲ್ಲಿ ಎರಡು ಆಸ್ಪತ್ರೆಗಳ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗುವುದು. ಕಳೆದ 20 ವರ್ಷಗಳ ಹಿಂದೆ ತಾಲೂಕು ಸ್ಥಾನಮಾನ ಪಡೆದ ಭಾಗಗಳಲ್ಲಿಯೇ ಸಮರ್ಪಕ ಅಭಿವೃದ್ಧಿ ಕಂಡಿಲ್ಲ. ಆದರೆ, ಈ ಭಾಗದಲ್ಲಿ ಹೆಚ್ಚಿನ ಅನುದಾನ ಮಂಜೂರಾತಿ, ಬೃಹತ್ ಕಾಮಗಾರಿಗಳಿಗೆ ಚಾಲನೆ ಸೇರಿದಂತೆ ಹಲವು ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ ಎಂದರು.

ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಜನವರಿಯಲ್ಲಿ ಚಾಲನೆ ನೀಡಲಾಗುವುದು. ಇನ್ನು ಚಿಕ್ಕಬಳ್ಳಾಪುರದಲ್ಲಿ ಸಂಭ್ರಮದ 7 ದಿನಗಳ ಉತ್ಸವದ ಮೂಲಕ ಅಭಿವೃದ್ಧಿ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೇದ ಸುದರ್ಶನರೆಡ್ಡಿ, ಕೋಚಿಮುಲ್ ನಿರ್ದೇಶಕ ಸುಬ್ಬಾರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಹನುಮೇಗೌಡ, ಜಿ.ವಿ.ರಾಜಶೇಖರ್, ವೆಂಕಟೇಶ್, ಜಗನ್ನಾಥ್, ಬಾಲಕೃಷ್ಣ ಮತ್ತಿತರರು ಇದ್ದರು.

2.22 ಕೋಟಿ ಬಡ್ಡಿ ರಹಿತ ಸಾಲ

ಡಿಸಿಸಿ ಬ್ಯಾಂಕಿನ ಮೂಲಕ 60 ಸಂಘಗಳ 701 ಸದಸ್ಯರಿಗೆ 2.22 ಕೋಟಿ ರೂಪಾಯಿ ಮೌಲ್ಯದ ಚೆಕ್ ಮೂಲಕ ಬಡ್ಡಿ ರಹಿತ ಸಾಲ ವಿತರಿಸಲಾಯಿತು. 19 ಸಂಘಗಳಿಗೆ ರಾಜ್ಯ ಸರ್ಕಾರದಿಂದ ಪ್ರತಿ ಸಂಘಕ್ಕೆ 1 ಲಕ್ಷ ಸುತ್ತು ನಿಧಿ ನೀಡುತ್ತಿದ್ದು ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಚಿವರು ಸಲಹೆ ನೀಡಿದರು.

ಪ್ರತಿ ಮನೆಗೂ ಶುದ್ಧ ನೀರು ಪೂರೈಕೆ

ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ನೀಡುವ ಯೋಜನೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಅಣೆಕಟ್ಟಿನಿಂದ ಎಲ್ಲ ಗ್ರಾಮಗಳ ಪ್ರತಿ ಮನೆಗೂ ಶುದ್ಧ ನೀರು ಪೂರೈಸಲಾಗುತ್ತದೆ. ಇದಕ್ಕಾಗಿ 50 ಕೋಟಿ ಅನುದಾನ ಮಂಜೂರಾಗಿದೆ. ಈ ಭಾಗದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿದ್ದು ಯುವಜನತೆಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಇನ್ನು ಮುಂದಿನ ವರ್ಷ ಎತ್ತಿನಹೊಳೆ ಯೋಜನೆ ಮೂಲಕ ಈ ಭಾಗದ ಎಲ್ಲ ಕೆರೆಗಳಿಗೆ ನೀರು ಹರಿಸಿ, ಆ ಮೂಲಕ ಅರೆ ಮಲೆನಾಡಿನ ಮಂಚೇನಹಳ್ಳಿಯನ್ನು ಸಂಪೂರ್ಣ ಮಲೆನಾಡಾಗಿ ಪರಿವರ್ತಿಸಲು ಶ್ರಮಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಫಲಾನುಭವಿಗಳ ಪಾರದರ್ಶಕ ಆಯ್ಕೆ

ಮುಂದಿನ ವಾರ ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಲಾಗುವುದು. ಪ್ರತಿ ಗ್ರಾಮದ ಎಲ್ಲ ವಸತಿ ರಹಿತರಿಗೆ ನಿವೇಶನ ವಿತರಿಸಲಾಗುವುದು. ಈಗಾಗಲೇ ಪ್ರತಿ ಗ್ರಾಪಂಗೆ ತಲಾ 100 ಮನೆಗಳಂತೆ ಸಾಮಾನ್ಯ ವರ್ಗಕ್ಕೆ ಮನೆಗಳನ್ನು ಮಂಜೂರು ಮಾಡಿಸಿದ್ದು, ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲಿ ಸಾಮಾನ್ಯ ವರ್ಗದವರಿಗಾಗಿಯೇ 3,200 ಮನೆ ಮಂಜೂರು ಸಿಕ್ಕಿದೆ. ಇನ್ನು ಮನೆ ಮತ್ತು ನಿವೇಶನಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳ ಪಾರದರ್ಶಕ ಆಯ್ಕೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.