ಜಿಲ್ಲೆ

ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಜಾಗದ ಜಟಾಪಟಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮೇಲ್ದರ್ಜೆಗೆ ಏರಿರುವ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಗುಂಡೂರಾವ್ ಬಡಾವಣೆಯಲ್ಲಿ ಜಾಗ ಗುರುತಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತ ಆಗುತ್ತಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆ ಬಂದರೆ ಪಟ್ಟಣದ ಪಾರಂಪರಿಕ ಶ್ರೀ ಗಣಪತಿ ಜಾತ್ರೋತ್ಸವಕ್ಕೆ ಅಡ್ಡಿ ಆಗಲಿದೆ ಎನ್ನುವುದು ಬಹುತೇಕರ ಆತಂಕ. ಬೆಳೆಯುತ್ತ್ತಿರುವ ಊರಿಗೆ ಸುಸಜ್ಜಿತ ಆಸ್ಪತ್ರೆ ಬರುತ್ತಿರುವುದು ಸ್ವಾಗತಾರ್ಹ. ಆದರೆ ಈಗ ಆಯ್ಕೆ ಮಾಡಿಕೊಂಡಿರುವ ಜಾಗ ಇದಕ್ಕೆ ಸೂಕ್ತ ಅಲ್ಲ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ಸಾಕಷ್ಟು ಹೋರಾಟಗಳ ನಂತರ 4 ವರ್ಷಗಳ ಹಿಂದೆ ಕುಶಾಲನಗರ ತಾಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಒಂದು ತಾಲೂಕು ಕೇಂದ್ರದಲ್ಲಿ ಇರಬೇಕಾದ ಮೂಲಭೂತ ಸೌಲಭ್ಯಗಳನ್ನು ಇದೀಗ ಒಂದೊAದಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಪೈಕಿ ತಾಲೂಕು ಆಸ್ಪತ್ರೆ ಕೂಡ ಒಂದು. ಕುಶಾಲನಗರದಲ್ಲಿ ಹಾಲಿ ಸಮುದಾಯ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಗೆ ತಾಲೂಕು ವ್ಯಾಪ್ತಿ ಮಾತ್ರವಲ್ಲದ ಪಕ್ಕದ ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಹಾಗಾಗಿ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ.

ಈಗಿನ ಸರ್ಕಾರದಲ್ಲಿ ಕುಶಾಲನಗರ ಮೂಲದ ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿಯಾಗಿದ್ದು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಸ್ಥಳೀಯ ಮುಖಂಡರ ಸತತ ಪ್ರಯತ್ನದ ಫಲವಾಗಿ ಈ ಬಾರಿಯ ಬಜೆಟ್‌ನಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು 100 ಆಸ್ಪತ್ರೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 42 ಕೋಟಿ ರೂ. ಕೂಡ ಮಂಜೂರಾಗಿದೆ. ಈ ಬೆನ್ನಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆಸಿದಾಗ ಗುಂಡೂರಾವ್ ಬಡಾವಣೆಯ ಖಾಲಿ ಜಾಗದಲ್ಲಿ 4 ಎಕರೆ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಆರೋಗ್ಯ ಇಲಾಖೆ ಹೆಸರಿಗೆ ಆರ್‌ಟಿಸಿ ಕೂಡ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಆದರೆ ಗುಂಡೂರಾವ್ ಬಡಾವಣೆಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತ ಆಗುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಶ್ರೀ ಗಣಪತಿ ರಥೋತ್ಸವಕ್ಕೆ ಸಂಬAಧಿಸಿದ ಪಾರಂಪರಿಕ ಜಾತ್ರಾ ಚಟುವಟಿಕೆಗಳು ಇಲ್ಲಿಯ ಮೈದಾನದಲ್ಲಿ ಏರ್ಪಡಿಸುವುದರಿಂದ ಪಾರಂಪರಿಕ ಆಚರಣೆಗಳಿಗೆ ಅಡ್ಡಿ ಉಂಟಾಗುವ ಆತಂಕ ಪ್ರಮುಖವಾಗಿ ಕಂಡು ಬರುತ್ತಿದೆ. ಕುಶಾಲನಗರ ಶ್ರೀ ಗಣಪತಿ ದೇವಾಲಯ ರಥೋತ್ಸವ ಸಂದರ್ಭ 15 ದಿನಗಳ ಕಾಲ ಜಾತ್ರೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುಂಡೂರಾವ್ ಬಡಾವಣೆಯ ಮೈದಾನದಲ್ಲೇ ಸಂಘಟಿಸಿಕೊAಡು ಬರಲಾಗುತ್ತಿದೆ. ಜಾತ್ರೋತ್ಸವ ಅಂಗವಾಗಿ ಜಾನುವಾರು ಜಾತ್ರೆ, ಕೃಷಿ ಮೇಳ ಕೂಡ ನಡೆಯುವುದು ಇಲ್ಲಿಯೇ. ಈ ಕಾರ್ಯಕ್ರಮಗಳು ಕೊಡಗು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಯ ಜನರನ್ನೂ ದೊಡ್ಡ ಸಂಖ್ಯೆಯಲ್ಲಿ ಸೆಳೆಯುತ್ತದೆ. ಇಂಥ ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಗೆ ಜಾಗ ಗುರುತಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಊರಿನ ಹಿರಿಯರು.

ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಭೂಮಿ ಬೆಲೆ ಗಗನಕ್ಕೆ ಏರಿದೆ. ಇಂಥ ಪರಿಸ್ಥಿತಿಯಲ್ಲಿ ವಿಶಾಲವಾದ, ಎಲ್ಲಾ ಚಟುವಟಿಕೆಗಳಿಗೂ ಸೂಕ್ತವಾದ ಸ್ಥಳ ಇರುವುದು ಗುಂಡೂರಾವ್ ಬಡಾವಣೆಯಲ್ಲಿ ಮಾತ್ರ. ಜಾತ್ರೋತ್ಸವ ಮಾತ್ರವಲ್ಲದೆ ವಿವಿಧ ಸಮುದಾಯದವರ ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆಗಳು, ಮೇಳಗಳು, ಕ್ರಿಕೆಟ್ ಸೇರಿದಂತೆ ಕ್ರೀಡಾಕೂಟಗಳಿಗೆ ಈ ಜಾಗವೇ ಬಳಕೆ ಆಗಿದೆ. ಇಲ್ಲಿ ಸುಮಾರು 6 ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆಂದು ಈ ಹಿಂದೆಯೇ ಮೀಸಲಿಡಲಾಗಿದೆ. ಆದರೆ ಮತ್ತೆ ಇದೇ ಜಾಗದಲ್ಲಿ ಆಸ್ಪತ್ರೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಜಾಗ ಕೊಡುತ್ತಾ ಹೋದರೆ ಸಾಂಸ್ಕೃತಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಬೇರೆ ಸ್ಥಳ ಯಾವುದಿದೆ ? ಎಂದು ಕೂಡ ಕೇಳಲಾಗುತ್ತಿದೆ.

ಮೇಲ್ದರ್ಜೆಗೆ ಏರಿಸಿರುವ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಗುಂಡೂರಾವ್ ಬಡಾವಣೆ ಜಾಗವನ್ನು ತರಾತರಿಯಲ್ಲಿ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಕೆಲವರ ವೈಯಕ್ತಿಕ ಹಿತಾಶಕ್ತಿಯೂ ಇದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಹಾಲಿ ಸಮುದಾಯ ಕೇಂದ್ರ ಇರುವ ಜಾಗ, ಕಂದಾಯ ಇಲಾಖೆ ಕಚೇರಿಗಳು ಇರುವ ಪ್ರದೇಶ, ಐಬಿ, ಪಾಳುಬಿದ್ದಿರುವ ನೀರಾವರಿ ಇಲಾಖೆ ವಸತಿಗೃಹಗಳು ಹೀಗೆ ನಗರದೊಳಗಡೆಯೇ ಬೇಕಾದಷ್ಟು ಜಾಗ ಇದೆ. ನಗರ ವಾಪ್ತಿಯ ಸುತ್ತಳತೆಯಲ್ಲಿ ಮುಳ್ಳುಸೋಗೆ, ಕೂಡಿಗೆಯಲ್ಲಿ ಕೂಡ ವಿಶಾಲ ಸ್ಥಳಾವಕಾಶ ಇದೆ. ಆಸ್ಪತ್ರೆ ನಿರ್ಮಾಣಕ್ಕೆ ಇಂಥ ಜಾಗ ಆಯ್ಕೆ ಮಾಡಿಕೊಳ್ಳುವುದು ಬಿಟ್ಟು ಗುಂಡೂರಾವ್ ಬಡಾವಣೆಯ ಜಾಗವೇ ಯಾಕೆ ಎನ್ನುವ ಪ್ರಶ್ನೆಗಳು ಎದ್ದಿದೆ.

ಒಂದು ವೇಳೆ ಹಠಕ್ಕೆ ಬಿದ್ದವರಂತೆ ಗುಂಡೂರಾವ್ ಬಡಾವಣೆಯಲ್ಲೇ ಮೇಲ್ದರ್ಜೆಗೆ ಏರಿಸಲಾಗಿರುವ ಕುಶಾಲನಗರ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಜಾತ್ರಾ ಮೈದಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಂದೋಲನ ಮಾದರಿಯಲ್ಲಿ ಹೋರಾಟ ಸಂಘಟಿಸುವ ಸಿದ್ಧತೆಯೂ ನಡೆಯುತ್ತಿದೆ.

ಸರ್ಕಾರದ ಯೋಜನೆ ಬರುವುದೇ ದೊಡ್ಡದು. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಾಗದ ವಿವಾದ ಸೃಷ್ಟಿಸಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುವುದು ಬೇಡ ಎಂದು ಹಲವರು ವಾದಿಸುತ್ತಿದ್ದಾರೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ ಅದೀಗ ಈಡೇರಿದೆ. ಇಂಥ ಸಂದರ್ಭದಲ್ಲಿ ಸ್ಥಳದ ವಿಷಯ ಮುಂದಿಟ್ಟುಕೊAಡು ಅಡ್ಡಿ ಮಾಡುವುದು ಸರಿಯಲ್ಲ ಎನ್ನುವ ಮಾತುಗಳೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಗುಂಡೂರಾವ್ ಬಡಾವಣೆಯಲ್ಲಿ ಖಾಲಿ ಜಾಗ ಒಟ್ಟು ಎಷ್ಟಿದೆ ಎಂದು ಮೊದಲು ಪರಿಶೀಲಿಸಬೇಕು. ನಂತರ ಮೈದಾನ ಜಾಗ ಉಪಯೋಗಿಸದೇ ಆಸ್ಪತ್ರೆ ಕಟ್ಟಡ ನಿರ್ಮಾಣ ಸಾಧ್ಯತೆ ಬಗ್ಗೆ ಪರಿಶೀಲನೆಯ ಸಲಹೆ ಕೆಲವರಿಂದ ವ್ಯಕ್ತ ಆಗುತ್ತಿದೆ. ಕುಶಾಲನಗರಕ್ಕೆ ಅತ್ಯುತ್ತಮ ಸೌಲಭ್ಯ ಇರುವ ಆಸ್ಪತ್ರೆ ಬರುತ್ತದೆ ಎನ್ನುವುದಾದರೆ ಎಲ್ಲೇ ಆದರೂ ಕೊಡಗಿನ ಎಲ್ಲಾ ಜನತೆಯ ಉಪಯೋಗಕ್ಕೆ ಬರುವುದರಿಂದ ಸ್ಥಳದ ವಿಷಯ ಇಟ್ಟುಕೊಂಡು ವಿರೋಧ ಸರಿಯಲ್ಲ. ಆ ಸ್ಥಳ, ಈ ಸ್ಥಳ, ಜಾತ್ರಾ ಸ್ಥಳ ಎನ್ನುವುದಕ್ಕಿಂತ ವಿಶಾಲವಾದ ಸ್ಥಳ ಸಿಕ್ಕಿದ ಜಾಗದಲ್ಲೇ ನಿರ್ಮಿಸಬಹುದು ಎಂದು ಕೂಡ ಹೇಳಲಾಗುತ್ತಿದೆ.

ಗುಂಡೂರಾವ್ ಬಡಾವಣೆಯಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು 'ಕುಶಾಲನಗರದಲ್ಲಿ ತಾಲೂಕು ಆಸ್ಪತ್ರೆಗೆ ನಮ್ಮ ವಿರೋಧ ಇಲ್ಲ' ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಜಾಗದ ವಿಷಯದಲ್ಲಷ್ಟೇ ಆಕ್ಷೇಪ ಎನ್ನುತ್ತಾರೆ.

ಸದ್ಯದ ಮಟ್ಟಿಗೆ ಕುಶಾಲನಗರದಲ್ಲಿ ವಿಶಾಲ ಮೈದಾನ ಇರುವುದು ಗುಂಡೂರಾವ್ ಬಡಾವಣೆಯಲ್ಲಿ ಮಾತ್ರ. ಇಲ್ಲಿ ಆಸ್ಪತ್ರೆ ಬಂದರೆ ಈ ಮೈದಾನದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಸಲು ಸಾಧ್ಯವಾಗುತ್ತದಾ ? ಆಸ್ಪತ್ರೆ ಎಂದಾಗ ಅಲ್ಲಿಯ ವಾತಾವರಣ ನಿಶ್ಯಬ್ಧವಾಗಿರಬೇಕು. ಚಿಕಿತ್ಸೆಗೆ ಪೂರಕ ಪರಿಸ್ಥಿತಿಗಳು ಇರಬೇಕು. ಮೈದಾನದ ಪಕ್ಕದಲ್ಲೇ ಆಸ್ಪತ್ರೆ ನಿರ್ಮಾಣ ಆದರೆ ಇವೆಲ್ಲಾ ಸಾಧ್ಯವೇ ? ಎಂದು ಪ್ರಶ್ನಿಸುತ್ತಾರೆ.

ಕುಶಾಲನಗರ ಪಟ್ಟಣ ತೀವ್ರಗತಿಯಲ್ಲಿ ನಗರೀಕರಣ ಆಗುತ್ತಿದೆ. ಇಂಥ ಊರಿನಲ್ಲಿ ಸಾಹಿತ್ಯಿಕ, ಬೌದ್ಧಿಕ ಚಟುವಟಿಕೆಗಳನ್ನು ನಡೆಸಲು ಒಂದು ಉತ್ತಮ ಸ್ಥಳ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗುಂಡೂರಾವ್ ಬಡಾವಣೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಈ ಮೊದಲೇ 6 ಎಕರೆ ಜಾಗ ಮೀಸಲಿಡಲಾಗಿತ್ತು. ಪಟ್ಟಣದ ಪಾರಂಪರಿಕ ಜಾತ್ರೋತ್ಸವ ಕೂಡ ಇದೇ ಮೈದಾನದಲ್ಲಿ ನಡೆಯುತ್ತದೆ. ವಿವಿಧ ಸಮಾವೇಶಗಳು, ಕ್ರೀಡಾಕೂಟಗಳೂ ಇಲ್ಲಿಯೇ ಆಯೋಜನೆಗೊಳ್ಳುತ್ತಿರುತ್ತದೆ. ಈ ಉದ್ದೇಶಗಳಿಗೆ ಇಂಥ ಮತ್ತೊಂದು ಜಾಗ ಕುಶಾಲನಗರದಲ್ಲಿ ಬೇರೆ ಇಲ್ಲ. ಆದರೆ ಆಸ್ಪತ್ರೆ ನಿರ್ಮಾಣಕ್ಕೆ ಬೇರೆ ಕಡೆ ಉತ್ತಮ ಜಾಗಗಳು ಇದೆ.

ವಿ.ಪಿ. ಶಶಿಧರ್, ಅಧ್ಯಕ್ಷ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಸಮಿತಿ

ಸಾಕಷ್ಟು ಹೋರಾಟ ಮಾಡಿ ಕುಶಾಲನಗರವನ್ನು ಒಂದು ತಾಲೂಕಾಗಿ ಮಾಡಿ ಕೈಗೆ ಕೊಟ್ಟಿದ್ದೇವೆ. ಇಂಥ ತಾಲೂಕನ್ನು ಅಭಿವೃದ್ಧಿ ಮಾಡಬೇಕಾದರೆ ದೂರದೃಷ್ಟಿ ಇರಬೇಕು. ಇದು ಗುಂಡೂರಾವ್ ಬೆಳೆದ ಊರು. ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಊರಿಗಾಗಿ ಶ್ರಮಿಸಿದವರ ಜತೆ ಚರ್ಚೆ ಮಾಡಬೇಕು. ಗುಂಡೂರಾವ್ ಬಡಾವಣೆ ಜಾಗವನ್ನು ಯಾವುದೇ ಕಾರಣಕ್ಕೂ ಆಸ್ಪತ್ರೆ ನಿರ್ಮಾಣಕ್ಕೆ ಬಳಸಬಾರದು. ಈ ಜಾಗ ಕುಶಾಲನಗರ ಪಾರಂಪರಿಕ ಜಾತ್ರೋತ್ಸವಕ್ಕೆ ಮೀಸಲಿಡಬೇಕು. ಆಸ್ಪತ್ರೆಗೆ ಬೇರೆ ಕಡೆ ಬೇಕಾದಷ್ಟು ಜಾಗ ಇದೆ. ಮೈ ಬಗ್ಗಿಸಿ ಹುಡುಕುವ ಕೆಲಸ ಮಾಡಲಿ.

ಕೆ.ಪಿ. ಚಂದ್ರಕಲಾ, ಮಾಜಿ ಅಧ್ಯಕ್ಷೆ, ಕೊಡಗು ಜಿಲ್ಲಾ ಪಂಚಾಯಿತಿ

ಕುಶಾಲನಗರಕ್ಕೆ ಮೇಲ್ದರ್ಜೆಯ ಆಸ್ಪತ್ರೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಊರಿನ ಸಂಸ್ಕೃತಿ, ಕಲೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು. ಕುಶಾಲನಗರದ ಜಾತ್ರಾ ಮೈದಾನದಲ್ಲಿ ಐತಿಹಾಸಿಕ ಜಾತ್ರೆ, ಕ್ರೀಡೆಗಳು, ಹನುಮ ಜಯಂತಿಯ ಪ್ರಯುಕ್ತ ನಡೆಯುವ ಶೋಭಾ ಯಾತ್ರೆ, ಕೃಷಿಮೇಳ, ಉರುಸ್ ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ. ಒಂದು ವೇಳೆ ತಾಲೂಕು ಆಸ್ಪತ್ರೆ ಅಲ್ಲಿ ನಿರ್ಮಾಣವಾದರೆ ಈ ಎಲ್ಲಾ ಕಾರ್ಯಕ್ರಮಗಳು ಕುಶಾಲನಗರದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಮುಖಂಡರು, ಸಂಘಟನೆಯ ಮುಖಂಡರು, ಊರಿನ ಹಿತಚಿಂತಕರ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

ವಿ.ಎಸ್. ಆನಂದ್‌ಕುಮಾರ್, ಅಧ್ಯಕ್ಷ, ಗೆಳೆಯರ ಬಳಗ, ಕುಶಾಲನಗರ

ಜಾತ್ರಾ ಮೈದಾನ ರಕ್ಷಣೆ ನಮ್ಮ ಜವಾಬ್ದಾರಿ. ಈ ಹಿಂದಿನ ಜಾತ್ರಾ ಮೈದಾನ ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ಆದರೆ ಈ ಜಾತ್ರಾ ಮೈದಾನ ಹಾಗೆ ಆಗಲು ಬಿಡುವುದಿಲ್ಲ. ಕುಶಾಲನಗರದ ಪಾರಂಪರಿಕ ಜಾತ್ರೆ ನಮ್ಮ ನಂತರವೂ ಮುಂದುವರಿಯಬೇಕು. ಇದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಇಲ್ಲಿ ಆಸ್ಪತ್ರೆ ನಿರ್ಮಾಣ ಆಗುವುದರಿಂದ ಜಾತ್ರೋತ್ಸವಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮೇಲ್ದರ್ಜೆಗೆ ಏರಿಸಲ್ಪಡುವ ಸುಸಜ್ಜಿತ ಆಸ್ಪತ್ರೆ ಕುಶಾಲನಗರಕ್ಕೆ ಬಹಳ ಅಗತ್ಯವಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ