ಕುಶಾಲನಗರ:
ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಅನುಕೂಲಕ್ಕಾಗಿ ವೈಯಕ್ತಿಕವಾಗಿ ಆ್ಯಂಬುಲೆನ್ಸ್ ವಾಹನ ಕೊಡುಗೆಯಾಗಿ ನೀಡುವುದಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು. ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಟರಿ ಸಂಸ್ಥೆಯ ಕೋರಿಕೆ ಮೇರೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಕೊಡುಗೆಯಾಗಿ ನೀಡಲಾದ ಎರಡು ಡಯಾಲಿಸಿಸ್ ಯಂತ್ರಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಮಂಜೂರು ಮಾಡಿಸಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ ಮಾಡಲಾಗಿದೆ. ಈಗ ಹೆಚ್ಚುವರಿಯಾಗಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಸೆಂಟ್ರಲ್ ಬ್ಯಾಂಕ್ ನೀಡಿದೆ. ಇದರಿಂದ ತಾಲೂಕಿನಲ್ಲಿ ಮೂತ್ರಪಿಂಡ ತೊಂದರೆಯಿAದ ಬಳಲುತ್ತಿರುವ ಬಡ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಡಯಾಲಿಸಿಸ್ ಕೇಂದ್ರದ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ಯೋಜನಾ ಮುಖ್ಯಸ್ಥ ಎಸ್.ಕೆ. ಸತೀಶ್ ಮಾತನಾಡಿ, ರೋಟರಿ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಮಾನವ ಸೇವೆಯೇ ಮೂಲ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆಯ ಕೋರಿಕೆ ಮೇರೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳು ನಮ್ಮ ಕೋರಿಕೆಗೆ ಸ್ಪಂದಿಸಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡುತ್ತಿದ್ದು, ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಲಯ ಮುಖ್ಯಸ್ಥ ಕೆ. ಧಾರಾಸಿಂಗ್ ನಾಯಕ್ ಮಾತನಾಡಿ,ಸಿಎಸ್‌ಆರ್ ನಿಧಿಯಿಂದ 15 ಲಕ್ಷ ರೂ. ವೆಚ್ಚದ ಎರಡು ಡಯಾಲಿಸಿಸ್ ಯಂತ್ರಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ.ಇದರಿಂದ ರೋಗಿಗಳಿಗೆ ತುಂಬ ಉಪಯುಕ್ತವಾಗಲಿದೆ. ಮುಂದಿನ ದಿನಗಳಲ್ಲೂ ಸಾಮಾಜಿಕ ಸೇವಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ಜಿಲ್ಲಾ ರೋಟರಿ ಗವರ್ನರ್ ವಿಕ್ರಂದತ್ತ ಮಾತನಾಡಿದರು.
ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರೋಟರಿ ಸಂಸ್ಥೆಯ ಸಹಾಯಕ ಗವರ್ನರ್ ಡಾ.ಹರೀಶ್ ಶೆಟ್ಟಿ, ಕುಶಾಲನಗರ ರೋಟರಿ ಸಂಸ್ಥೆ ಕಾರ್ಯದರ್ಶಿ ಕಿರಣ್, ಸೆಂಟರ್ ಬ್ಯಾಂಕ್ ಮಡಿಕೇರಿ ಶಾಖೆಯ ವ್ಯವಸ್ಥಾಪಕಿ ಪ್ರೀಯಾಂಕಾ, ಕುಶಾಲನಗರ ಶಾಖೆಯ ವ್ಯವಸ್ಥಾಪಕ ರಾಜ್ ಮೋಹನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಇಂದೂಧರ್, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಮಧುಸೂದನ್, ಡಯಾಲಿಸಿಸ್ ಕೇಂದ್ರದ ರಮ್ಯಪೂಜಾರಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕೆ.ಧಾರಾಸಿಂಗ್ ನಾಯಕ್, ಡಾ.ಮಂತರ್ ಗೌಡ,ಡಾ.ಸತೀಶ್ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.