ಜಿಲ್ಲೆ

ಹೊಸಪೇಟೆಯಲ್ಲಿ ಹರಿದ ಸ್ಥಿತಿಯಲ್ಲೇ ಹಾರಾಡಿದ ರಾಷ್ಟ್ರಧ್ವಜ

Vijayanagara - Veerendra
  • ಶುಕ್ರವಾರ ಮಧ್ಯಹ್ನ ಅವರೋಹಣ

ಹೊಸಪೇಟೆ: ಇಲ್ಲಿನ ಡಾ.ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ೪೦೫ ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾಷ್ಟ್ರ ಪತಾಕೆ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿರುವ ಬಗ್ಗೆ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಶುಕ್ರವಾರ ಅವರೋಹಣ ಮಾಡಲಾಯಿತು.
ಗುರುವಾರದಿಂದಲೇ ಧ್ವಜ ಹರಿದ ಸ್ಥಿತಿಯಲ್ಲೇ ಹಾರಾಡುತ್ತಿತ್ತು. ಈ ಬಗ್ಗೆ ಕಾಳಜಿ ವಹಿಸಿ ಕೆಳಗಿಳಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಸ್ಥಳೀಯ ಶಾಸಕ ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ತಮ್ಮ ವರ್ಚಸ್ಸು ವೃದ್ಧಿಗಾಗಿ ೪೦೫ ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪನೆಗೆ ತೋರಿದ ಆಸಕ್ತಿ, ಅದರ ನಿರ್ವಹಣೆಯತ್ತ ಹರಿಸಿಲ್ಲ. ಹರಿದ ಬಾವುಟ ಹಾರಾಟ ನಡೆಸಿದ್ದರಿಂದ ರಾಷ್ಟ್ರಕ್ಕೆ ಅಗೌರವ ತೋರಿದಂತೆ ಎಂದು ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹರಿದ ಧ್ವಜದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಮಧ್ಯಾಹ್ನ ೧ ಗಂಟೆ ವೇಳೆಗೆ ರಾಷ್ಟ್ರಧ್ವಜವನ್ನು ಅವರೋಹಣಗೊಳಿಸಿದರು.
ದೇಶದ ಅತೀ ಎತ್ತರ ರಾಷ್ಟ್ರಧ್ವಜ ಹೊಂದಿರುವ ಜಿಲ್ಲೆ ಎಂಬ ಕೀರ್ತಿಗೆ ವಿಜಯನಗರ ಪಾತ್ರವಾಗಿದೆ. ಆದರೆ, ಈ ಘಟನೆಯಿಂದ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವಂತಾಯಿತು.