ಹೊಪಸಪೇಟೆಯ ವಿಜಯನಗರ ಕಾಲೋನಿಯಲ್ಲಿ ಸಾರ್ವಜನಿಕ ಉದ್ಯಾನದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮನೆಯನ್ನು ನಗರಸಭೆ ಅಧಿಕಾರಿಗಳು ಜೆಸಿಬಿಗಳ ನೆರವಿನೊಂದಿಗೆ ಮಂಗಳವಾರ ತೆರವುಗೊಳಿಸಿದರು. 
ಜಿಲ್ಲೆ

ಹೊಸಪೇಟೆ: ಉದ್ಯಾನದಲ್ಲಿ ತಲೆ ಎತ್ತಿದ್ದ ಕಟ್ಟಡಗಳ ನೆಲಸಮ

Vijayanagara - Veerendra

ಹೊಸಪೇಟೆ: ನಗರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ನಗರಸಭೆ ಜೆಸಿಬಿಗಳು ಗರ್ಜಿಸಿದ್ದು, ಸಾರ್ವಜನಿಕ ಉದ್ಯಾನದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕಟ್ಟಡಗಳನ್ನು ನೆಮಸಮಗೊಳಿಸಲಾಗಿದೆ. ಈ ಮೂಲಕ ಸಾರ್ವಜನಿಕ ರಸ್ತೆ ಮತ್ತು ಉದ್ಯಾನಗಳನ್ನು ಅತಿಕ್ರಮಿಸಿಕೊಂಡವರಲ್ಲಿ ನಡುಕ ಸೃಷ್ಟಿಸಿದೆ.

ಇಲ್ಲಿನ ಬಳ್ಳಾರಿ ರಸ್ತೆಯಲ್ಲಿರುವ ವಿಜಯನಗರ ಕಾಲೋನಿಯ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟ ಸುಮಾರು ೪ ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ಅಕ್ರಮವಾಗಿ ಒಂದು ಮನೆ ನಿರ್ಮಾಣಗೊಂಡಿತ್ತು. ಅದರೊಂದಿಗೆ ಇನ್ನೆರಡು ಮನೆಗಳ ನಿರ್ಮಾಣಕ್ಕೆ ಬುನಾದಿ ಹಾಕಲಾಗಿತ್ತು. ಕೆಲ ವರ್ಷಗಳ ಹಿಂದೆಯೇ ನಗರದಲ್ಲಿ ಅಕ್ರಮ ಕಟ್ಟಡಗಳನ್ನು ನಗರಸಭೆ ಗುರುತು ಮಾಡಿತ್ತು.

ಸರ್ಕಾರಿ ಜಾಗೆಯಲ್ಲಿ ನಿರ್ಮಿಸಿಕೊಂಡಿರುವ ಮನೆಯನ್ನು ತೆರವುಗೊಳಿಸುವಂತೆ ನಗರಸಭೆ ಈ ಹಿಂದೆಯೇ ನೋಟಿಸ್ ಜಾರಿಗೊಳಿಸಿತ್ತು. ಅದನ್ನು ಪ್ರಶ್ನೆಸಿ ಮನೆ ನಿರ್ಮಿಸಿದ್ದ ಬಾಷಾ ಎಂಬುವರು ಹೊಸಪೇಟೆ ಸಿವಿಲ್ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕೋರ್ಟ್ ಹಾಗೂ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ, ಎಲ್ಲ ಹಂತದಲ್ಲಿ ನಗರಸಭೆ ಪರವಾಗಿ ಆದೇಶ ಬಂದಿತ್ತು. ಹೀಗಾಗಿ ಮಂಗಳವಾರ ಬೆಳಗ್ಗೆಯೇ ತೆರವು ಕಾರ್ಯಾಚರಣೆ ಆರಂಭಿಸಿತು. ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಅಧಿಕಾರಿಗಳು ಎರಡು ಜೆಸಿಬಿಗಳ ನೆರವಿನೊಂದಿಗೆ ಬಾಷಾ ಅವರ ಮನೆ ಹಾಗೂ ಇತರೆ ಎರಡು ಬುನಾದಿಗಳನ್ನು ಧ್ವಂಸಗೊಳಿಸಿದರು.

ಕಾನೂನು ಕ್ರಮಕ್ಕೆ ಚಿಂತನೆ:

ಸಾರ್ವಜನಿಕ ಉದ್ಯಾನದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಬಾಷಾ ಎಂಬುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರಸಭೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ವಿಜಯನಗರ ಕಾಲೋನಿಯ ಉದ್ಯಾನದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಬಾಷಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಕ್ತ ಸಲಹೆ ನೀಡುವಂತೆ ನಗರಸಭೆ ಕಾನೂನು ಸಲಹೆಗಾರರಿಗೆ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.

ನಗರದ ಸಾರ್ವಜನಿಕ ಉದ್ಯಾನ, ನಾಗರಿಕ ಬಳಕೆಗೆ ಮೀಸಲಿಟ್ಟ ಜಾಗೆಗಳನ್ನು ಕೆಲವರು ಕಬಳಿಸಿಕೊಂಡಿದ್ದಾರೆ. ಈ ಪೈಕಿ ಕಟ್ಟಡವನ್ನು ಬಾಷಾ ಎಂಬುವವರು ನಿರ್ಮಿಸಿದ್ದರೆ, ಇನ್ನೆರಡು ಬುನಾದಿ ಹಾಕಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಅವುಗಳನ್ನು ಸ್ವಯಂ ಪ್ರೇರಿತವಾಗಿ ತೆವುಗೊಳಿಸುವಂತೆ ನಗರಸಭೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದೆ. ಹೀಗಾಗಿ ಬಾಷಾ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ, ಇತರರಿಗೆ ಎಚ್ಚರಿಕೆಯ ಪಾಠವಾಗುತ್ತದೆ.

- ಮನೋಹರ್, ಪೌರಾಯುಕ್ತ, ಹೊಸಪೇಟೆ ನಗರಸಭೆ.