ಹೊಸಪೇಟೆ: ಜಿಲ್ಲೆಯಲ್ಲಿ ಸೆ.17 ರಿಂದ ಆ.02ರ ವರೆಗೆ ನಡೆಯುವ ಸ್ವಚ್ಚತಾ ಹೀ ಸೇವಾ ಅಭಿಯಾನದ ಮೂಲಕ ಶುಚಿತ್ವ ಮತ್ತು ನೈರ್ಮಲ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಷಾ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಸ್ವಚ್ಛೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ನೈರ್ಮಲ್ಯ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡುವಂತೆ ಜನಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ಬೃಹತ್ ಕಸದ ರಾಶಿಯನ್ನು ಗುರುತಿಸಿ ಅವುಗಳನ್ನು ಸ್ವಚ್ಚಗೊಳಿಸುವುದು. ಐತಿಹಾಸಿಕ ಸ್ಥಳಗಳು, ಹಾಗೂ ಧಾರ್ಮಿಕ ಸ್ಥಳಗಳ ಶುಚಿತ್ವವನ್ನು ಸುಧಾರಿಸಲು ಶ್ರಮದಾನಗಳನ್ನು ಹಮ್ಮಿಕೊಳ್ಳಲಾಗುವುದು. ಸ್ವಚ್ಛತಾ ಕಾರ್ಯಕರ್ತರಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದರ ಜತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಗುತ್ತದೆ. ಪರಿಸರ ಸ್ನೇಹಿ ತ್ಯಾಜ್ಯ ರಹಿತ ಹಬ್ಬಗಳ ಆಚರಣೆಗೆ ಪ್ರೋತ್ಸಾಹ ನೀಡುವುದು. ಸ್ವಚ್ಛ ಸುಜಲ, ಗ್ರಾಮ ಸಂಕ್ಪಲ ಹಾಗೂ ತ್ಯಾಜ್ಯದಿಂದ ಕಲಾಕೃತಿಗಳ ರಚನೆ ಸ್ವಚ್ಚ ಬೀದಿ ಸ್ವಚ್ಚ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಸೆ.25 ರಂದು ಒಂದು ದಿನ, ಒಂದು ಗಂಟೆ, ಎಲ್ಲರೂ ಶ್ರಮದಾನ ಮಾಡುವ ಮೂಲಕ (ಎಕ್ ದಿನ್, ಎಕ್ ಘಂಟಾ, ಎಕ್ ಸಾಥ್) ಎಂಬ ಘೋಷ ವಾಕ್ಯದಡಿ ಶ್ರಮದಾನ ಮಾಡಬೇಕು. ಅಭಿಯಾನದ ಯಶಸ್ವಿಗೆ ಎಲ್ಲಾ ಸಾರ್ವಜನಿಕರು ಮತ್ತು ಸಂಘಸAಸ್ಥೆಗಳು ಒಗ್ಗಟ್ಟಿನಿಂದ ಕೈ ಜೋಡಿಸಬೇಕಿದೆ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ದೀಪಾ, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸಿ.ಎಂ.ಮಹೇಶ್ವರಿ ಇತರರಿದ್ದರು.