ಜಿಲ್ಲೆ

ಯುವಕರು ದೇಶದ ಅಭಿವೃದ್ಧಿಗೆ ಶ್ರಮಿಸಿ

ಮಂಜುನಾಥ

ಹೊಸಪೇಟೆ: ಯುವ ಜನತೆಯು ಸದಾ ಕ್ರಿಯಾಶೀಲರಾಗಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಯುವ ಮನಸ್ಸುಗಳನ್ನು ಸೃಜನಶೀಲರನ್ನಾಗಿಸಲು ಯುವ ಜನೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಜನರ ಪ್ರತಿಭೆಗಳನ್ನು, ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತೇಜಿಸಲಾಗುತ್ತಿದೆ. ಯುವ ಜನತೆಯು ತಮ್ಮಲ್ಲಿರುವ ಕಲೆಯನ್ನು ಕಾರ್ಯಗತಗೊಳಿಸಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಕ್ರೀಡೆಗಳ ಶ್ರೀಮಂತಿಕೆಯನ್ನು ಯುವ ಮನಸ್ಸುಗಳಿಗೆ ತಿಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಪ್ರಸ್ತುತ ಸಮಾಜದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಸಾಹಿತ್ಯದ ಒಲವಿನಿಂದ ಜನಪದ ಸಂಸ್ಕೃತಿಗಳು ಮರೆಯಾಗುತ್ತಿವೆ. ಜನಪದ ಗೀತೆಗಳು ಇತಿಹಾಸವನ್ನು ತಿಳಿಸಲು ಸಹಕರಿಸಿದರೆ. ಜನಪದ ನೃತ್ಯಗಳು ನಮ್ಮ ಸಂಸ್ಕೃತಿಯ ಶ್ರೇಷ್ಟತೆ ಪರಿಚಯಿಸುತ್ತವೆ. ಯುವ ಸಮೂಹವು ನಾಡಿನ ಐತಿಹಾಸಿಕ ಜನಪದ ಕಲೆಗಳ ಕಲಿಕೆಯಲ್ಲಿ ತಲ್ಲೀನರಾಗಿ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು. ಹೊಸತನ್ನು ಕಲಿತು ಸದಾ ಚೈತನ್ಯದಿಂದಿರಿ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಡಿ ಕೆ.ಗ್ರೇಸಿ, ನೆಹರು ಯುವ ಕೇಂದ್ರ ಅಧಿಕಾರಿ ಮೊಂಟು ಪತ್ತಾರ್, ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಪ್ರಮುಖರಾದ ಮಂಜುನಾಥ ಜಿ.ಗೊಂಡವಾಳ, ಗುಂಡಿ ರಮೇಶ, ಈರಣ್ಣ, ಪ್ರಕಾಶ್ ಬಾಬು ಕಟಗಿ, ಕಿರಣ್ ಗುಜ್ಜಲ್ ಇತರರಿದ್ದರು.