ಜಿಲ್ಲೆ

ರೋಗ ಮುಕ್ತಕ್ಕೆ ಯೋಗ ರೂಢಿಸಿಕೊಳ್ಳಿ

ಮಂಜುನಾಥ

ಹೊಸಪೇಟೆ: ನಮ್ಮ ಜೀವನ ಕ್ರಮದಲ್ಲೇ ಯೋಗದ ಸಾಕಷ್ಟು ಅಂಶವಿದೆ, ಅದನ್ನು ಮರೆತ ಕಾರಣಕ್ಕೇ ನಾವಿಂದು ಯೋಗಭ್ಯಾಸವನ್ನು ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಜಿಲ್ಲಾಡಳಿತ, ಆಯುಷ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ನಗರದ ಸ್ವಾತಂತ್ರ‍್ಯ ಉದ್ಯಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೃಷಿ ಕಾಯಕದಲ್ಲಿ ನಮ್ಮ ದೇಹ, ಮನಸ್ಸುಗಳಿಗೆ ಸ್ವಾಸ್ಥ್ಯ ನೀಡುವಂತಹ ಹಲವು ಪ್ರಯೋಜನಗಳಿದ್ದವು. ಅಡುಗೆ ಮನೆಯಲ್ಲೇ ಸಾಕಷ್ಟು ದೈಹಿಕ ಶ್ರಮದ ಕೆಲಸಗಳಿದ್ದವು. ಅದೂ ಈಗ ಇಲ್ಲವಾಗಿದೆ. ಹೀಗಾಗಿ ಯೋಗ ಎಂಬ ಆರೋಗ್ಯದ ಮಹಾನ್ ಶಕ್ತಿಯನ್ನು ನಾವು ಅಗತ್ಯವಾಗಿ ಅಭ್ಯಾಸ ಮಾಡಬೇಕಾಗಿದೆ. ಜೀವನ ಶೈಲಿಯಲ್ಲಿ ಯೋಗ ಎಂಬುದು ಅವಿಭಾಜ್ಯ ಅಂಶವಾಗಿ ಮಾಡಬೇಕಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ ಮಾತನಾಡಿ, ನಗರದಲ್ಲಿ ಹಲವು ಉದ್ಯಾನಗಳಲ್ಲಿ ಯೋಗ ಶಿಬಿರಗಳನ್ನು ನಡೆಸಲು ಪ್ರಸ್ತಾವ ಇದೆ. ಈ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ನಗರಸಭೆ ಉತ್ಸುಕವಾಗಿದೆ, ಜಿಲ್ಲಾಡಳಿತ ಇದಕ್ಕೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆಗಳಲ್ಲಿ ಯೋಗ ಸಹ ಒಂದು. ಇತರ ದೇಶಗಳು ನಮಗೆ ಯೋಗ ಕಲಿಸಿಕೊಡುವ ಬದಲು ನಾವೇ ಇತರರಿಗೆ ಯೋಗ ಕಲಿಸಿಕೊಡಬೇಕಿದ್ದು. ಆ ಅವಕಾಶ ಇದೀಗ ಲಭಿಸಿದೆ. ಇದನ್ನು ನಾವು ಇನ್ನಷ್ಟು ಚೆನ್ನಾಗಿ ಬಳಸಿಕೊಂಡು ಇಡೀ ಸಮಾಜ ಕಾಯಿಲೆ ಮುಕ್ತವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ ಎಂದರು.

ಆಯುಷ್ ಇಲಾಖೆಯ ಅಧಿಕಾರಿ ಕೊಟ್ರಮ್ಮ, ಅಪರ ಬಿಇಒ ಶೇಖರಪ್ಪ ಹೊರಪೇಟೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಅಕ್ಕ, ಪ್ರಮುಖರಾದ ಬಿ.ವಿ.ಭಟ್, ಪ್ರೊ.ಎಫ್.ಟಿ.ಹಳ್ಳಿಕೇರಿ, ಡಾ.ಗುರಿಬಸವರಾಜ್, ಅನಂತ ಜೋಶಿ, ಶ್ರೀರಾಮ ಇತರರಿದ್ದರು.