ಹೊಸಪೇಟೆ: ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ನಿಶ್ಶಕ್ತಿ ಮತ್ತು ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ ಮುಂತಾದ ಜಂತುಹುಳು ಸೋಂಕಿನಿAದಾಗಿ ಸಂಭವಿಸಬಹುದಾದ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಂದ ಮುಕ್ತಿಹೊಂದಲು ಜಂತುಹುಳು ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಪದವಿ ಪೂರ್ವ ಬಾಲಕೀಯರ ಕಾಲೇಜಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ವರ್ಷಕ್ಕೆ ಎರಡು ಬಾರಿಯಾದರೂ ಈ ಮಾತ್ರೆಗಳನ್ನು ಸೇವಿಸಬೇಕು. ಹಾಗೂ ಜಿಲ್ಲೆಯಲ್ಲಿನ 1ರಿಂದ 19 ವರ್ಷದೊಳಗಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು ಹಾಗೂ ಇತರೆ ಎಲ್ಲಾ ಮಕ್ಕಳಿಗೂ ಅಲ್‌ಬೊಂಡೋಜೋಲ್ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಉತ್ತಮ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಇದರ ಉಪಯೋಗ ಪಡೆಯಬೇಕು ಎಂದರು.
ಡಿ.ಎಚ್.ಒ. ಡಾ.ಎಲ್.ಆರ್.ಶಂಕರ್ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಮಕ್ಕಳಿಗೆ ಜಂತುಹುಳ ನಿರ್ವಹಣೆಯ ಮಾತ್ರೆಯ ಜಾಗೃತಿ ಮೂಡಿಸಬೇಕು. ಎಲ್ಲಾ ಮಕ್ಕಳಿಗೆ ಜಂತುಹುಳ ನಾಶಕ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಂತುಹುಳು ನಾಶಕ ಮಾತ್ರ ನೀಡದೆ ಬಾಕಿ ಇರುವ ಮಕ್ಕಳಿಗೆ ಮ್ಯಾಪ್ -ಅಪ್ ದಿನದಂದು ಈ ಮಾತ್ರೆಯನ್ನು ಕಡ್ಡಾಯವಾಗಿ ನೀಡಬೇಕು. ದಾಖಲಾಗದ ಹಾಗೂ ಶಾಲೆಯಿಂದ ಹೊರಗೂಳಿನ ಮಕ್ಕಳಿಗೆ ಜಂತುಹುಳ ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದರು.
ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ನಾಯಕ, ಟಿಎಚ್‌ಒ ಡಾ.ಬಸವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇತರರಿದ್ದರು.