ಜಿಲ್ಲೆ

ಖಿನ್ನತೆಯಿದ್ದಲ್ಲಿ ತಪಾಸಣೆಗೆ ಒಳಗಾಗಿ

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟವ ದಿನಾಚರಣೆ ನಿಮಿತ್ತ ನಗರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಲೀಂ ಜಾಥಾಕ್ಕೆ ಚಾಲನೆ ನೀಡಿ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಖಿನ್ನತೆ, ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಬಾರದು. ಮಾನಸಿಕ ತೊಳಲಾಟದಂತಹ ಸಮಸ್ಯೆಗಳು ಎದುರಾದಲ್ಲಿ ತಪಾಸಣೆಗೆ ಒಳಗಾಗಬೇಕು. ಅವರ ಸಲಹೆ, ಸೂಚನೆಯಿಂದ ಮುಕ್ತರಾಗಬೇಕು ಎಂದು ತಿಳಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಾಸ್ಕರ ಮಾತನಾಡಿ, ಮಾನಸಿಕ ಖಿನ್ನತೆಯಿಂದ ಪಾರಾದರೆ ಆತ್ಮಹತ್ಯೆ ಪ್ರಮೇಯ ಬರುವುದಿಲ್ಲ. ಆಪ್ತ ಸಮಾಲೋಚನೆಯಿಂದ ಆತ್ಮಹತ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಜಂಬಯ್ಯ. ಆರ್‌ಸಿಎಚ್‌ಒ ಡಾ.ಭಾಸ್ಕರ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಷಣ್ಮುಖ ನಾಯ್ಕ. ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಜಗದೀಶ್ ಪಾಟ್ನೇ ಪಾಲ್ಗೊಂಡಿದ್ದರು.