ಹೊಸಪೇಟೆ: ನೈಜ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರ ನಿವಾಸದ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ಶೈಕ್ಷಣಿಕ ಸಹಾಯಧನ ಕಡಿತಗೊಳಿಸುವ ಆದೇಶ ಹಿಂಪಡೆಯಬೇಕು, ಎರಡು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಬೇಕು, ಹೊಸ ಕಾರ್ಡ್ ಮತ್ತು ನವೀಕರಣವನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.
ನಿರಂತರ ಹೋರಾಟದ ಫಲವಾಗಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದೆ. ಪ್ರಾರಂಭದಲ್ಲಿ ಕಾರ್ಮಿಕರಿಗೆ ಇದರಿಂದ ಹಲವು ಅನುಕೂಲಗಳಾಗಿದ್ದರೂ, ಇತ್ತೀಚಿಗೆ ಆಗಿರುವ ಬದಲಾವಣೆಗಳಿಂದಾಗಿ ನೈಜ ಕಾರ್ಮಿಕರು ಕಟ್ಟಡ ಕಾರ್ಮಿಕ ಮಂಡಳಿಯ ಸದಸ್ಯತ್ವವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಹೊಸ ಸದಸ್ಯತ್ವ ಪಡೆದುಕೊಳ್ಳಲು ಆಗತ್ತಿಲ್ಲ. ಸದ್ಯದ ವ್ಯವಸ್ಥೆಯಲ್ಲಿ ಅರ್ಜಿ ಹಾಕಲು ಹಲವು ಸಮಸ್ಯೆಗಳಿವೆ. ಹೈಕೋರ್ಟ್ ನಿರ್ದೇಶನದಂತೆ ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಇದುವರೆಗೆ ನಡೆದಿರುವ ಖರೀದಿಗಳಲ್ಲಿನ ಅವ್ಯವಹಾರಗಳು ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಎನ್.ಯಲ್ಲಲಿಂಗ, ಕಾರ್ಯದರ್ಶಿ ಹೇಮಂತನಾಯ್ಕ, ಪ್ರಮುಖರಾದ ಗೋಪಾಲ್, ರಾಮಾಂಜಿನಿ ಇತರರಿದ್ದರು.