ಹೊಸಪೇಟೆ: ಜಿಲ್ಲೆಯಲ್ಲಿರುವ ನೀರಾವರಿ ಪ್ರದೇಶಗಳಲ್ಲಿನ ನೀರಿನಾಸರೆಗಳ ಗಣತಿ ಕಾರ್ಯವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಸೂಕ್ತ ಅಂಕಿಅAಶಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಖ್ಯಿಕ ವಿಭಾಗ ಮತ್ತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಲಸಂಪನ್ಮೂಲ ಇಲಾಖೆಯ ಶೇ.100 ರಷ್ಟು ಕೇಂದ್ರ ಸುರಕ್ಷಿತ ಸಣ್ಣ ನೀರಾವರಿ ಅಂಕಿ-ಅAಶಗಳ ಸಮನ್ವಯೀಕರಣ ಯೋಜನೆಯಡಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಸಮನ್ವಯತೆಯಿಂದ ಗಣತಿ ಕ್ಷೇತ್ರ ಕಾರ್ಯ ಕೈಗೊಳ್ಳಬೇಕು ಎಂದರು.
ಜಿಪಂ ಮುಖ್ಯಯೋಜನಾಧಿಕಾರಿ ಅನ್ನದಾನ ಸ್ವಾಮಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸರ್ಮಪಕವಾಗಿ ಅನುಷ್ಠಾನಗೊಳಿಸಲು ಅಂಕಿ ಅಂಶಗಳು ಬಹಳ ಮುಖ್ಯ. ಆಯಾ ಇಲಾಖೆಯ ಅಧಿನಿಯಮದಲ್ಲಿರುವ ಕೆರೆಗಳ ಮಾಹಿತಿಯನ್ನು ಆಯಾ ತಾಲೂಕಿನ ತಹಸೀಲ್ದಾರರಿಗೆ ನೀಡಬೇಕು. ಅವರು ಗ್ರಾಮ ಆಡಳಿತಾಧಿಕಾರಿ ಮೊಬೈಲ್‌ನಲ್ಲಿ ಅಳವಡಿಸಲು ಅನುಕೂಲ ಮಾಡುತ್ತಾರೆ. ಜೆಸ್ಕಾಂರವರು ಕೃಷಿಗಳಲ್ಲಿ ನೀರಿನ ಮೀಟರ್ ಬೋಡ್‌ಗಳು ಎಷ್ಟು ಅಳವಡಿಸಿದ್ದಾರೆ ಎಂದು ಅದರ ಮಾಹಿತಿಯನ್ನು ನೀಡಿದರೆ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಕಾರ್ಯವನ್ನು ಬಹಳ ಬೇಗ ಬಗೆಹರಿಸಬಹುದು ಎಂದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಇ ಆರ್.ವೆಂಕಟೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ.ರಮೇಶ್ ಇತರರಿದ್ದರು.